ದಾವಣಗೆರೆಗೂ ಕಾಲಿಟ್ಟ ಹಿಜಾಬ್ ವಿವಾದ – ಕಾಲೇಜ್‍ಗೆ ಎಂ.ಪಿ.ರೇಣುಕಾಚಾರ್ಯ ಭೇಟಿ…

58
firstsuddi

ದಾವಣಗೆರೆ : ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ಬೆಣ್ಣೆ ನಗರಿಗೂ ಕಾಲಿಟ್ಟಿದೆ. ಹೊನ್ನಾಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.

ಒಂದೆಡೆ ಎಲ್ಲಿವರೆಗೆ ತರಗತಿಯಲ್ಲಿ ಹಿಜಾಬ್ ಇರುತ್ತದೆಯೋ ಅಲ್ಲಿಯವರೆಗೆ ಕೇಸರಿ ಶಾಲು ಧರಿಸಿಯೇ ಹಾಜರಾಗುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿದರೆ ಮತ್ತೊಂದೆಡೆ ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ನಾವು ಹಿಜಬ್ ಬುರ್ಕಾ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ಸರ್ಕಾರ ಏನೇ ಆದೇಶ ಹೊರಡಿಸಿದರು ನಾವು ಹಿಜಾಬ್ ತೆಗೆಯುವುದಿಲ್ಲ ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳು ಶಾಲಾ ತರಗತಿಯಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಹಾಕಿಕೊಂಡೇ ಕುಳಿತು ಪಾಠ ಕೇಳುತ್ತಿದ್ದು, ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನೂ ಕಾಲೇಜಿನಲ್ಲಿ ಹಿಜಾಬ್-ಕೇಸರಿಶಾಲು ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ವೇಳೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರ ಜೊತೆ ಚರ್ಚೆ ನಡೆಸಿದರು. ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬನ್ನಿ. ಆದರೆ, ಹಿಜಾಬ್ ತೆಗೆದಿಟ್ಟು ತರಗತಿಯೊಳಗೆ ಹೋಗಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿಯರು, ನಾವು ಮೊದಲಿನಿಂದಲೂ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದೇವೆ. ನಮ್ಮ ಹಿರಿಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಬರುತ್ತಿದ್ದರು. ಆಗ ಸಮಸ್ಯೆ ಇರಲಿಲ್ಲ. ಇದೀಗ ಸಮಸ್ಯೆ ಶುರುವಾಗಿದೆ. ನಾವು ಹಿಜಾಬ್ ಧರಿಸದಿದ್ದರೆ ಪೋಷಕರು ನಮ್ಮನ್ನು ಕಾಲೇಜಿಗೆ ಕಳುಹಿಸುವುದಿಲ್ಲ. ನಾವು ಹಿಜಾಬ್ ಧರಿಸುವುದನ್ನು ಬಿಡಲ್ಲ. ಅವರು ಶಾಲು ಹಾಕಿಕೊಂಡು ಬರಲಿ, ನಮಗೇನು ಅಭ್ಯಂತರವಿಲ್ಲ. ನಾವು ಹಿಜಾಬ್ ಹಾಕಿಯೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ.