ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ – 8 ಜನ ಸಾವು…

55
firstsuddi

ಕೋಲ್ಕತ್ತಾ : ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ ಉಂಟಾಗಿ 8 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಜಲ್ ಪೈಗುರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ವಿಜಯ ದಶಮಿ ಆಚರಣೆ ಬಳಿಕ ದುರ್ಗಾ ವಿಗ್ರಹದ ವಿಸರ್ಜನೆಗೆ ನೂರಾರು ಜನರು ನದಿಯ ದಡದಲ್ಲಿ ಜಮಾಯಿಸಿದ್ದರು. ಆಗ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಉಂಟಾಗಿ ಅನೇಕ ಭಕ್ತರು ಕೊಚ್ಚಿಹೋಗಿದ್ದಾರೆ. 50ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ. 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಚ್ಚಿಹೋಗಿದ್ದ 8 ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕಣ್ಮರೆಯಾದ ಇನ್ನಷ್ಟು ಜನರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ದುರಂತದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ದುರ್ಗಾದೇವಿ ಸಂಭ್ರಮಾಚರಣೆ ವೇಳೆ ದುರಂತ ನಡೆದಿರುವುದು ದುಖಃಕರ ಸಂಗತಿ. ಮಡಿದವರ ಕುಟುಂಬಕ್ಕೆ ನೆರವು ನೀಡಿ. ಅವರಿಗೆ ದುಃಖ ಭರಿಸುವ ಶಕ್ತಿ ದೇವಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.