ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಇಂದು ಮತ್ತೆ 10 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಓಮಿಕ್ರಾನ್ ಸೋಂಕಿತರ ಸಂಖ್ಯೆ 20ಕ್ಕೆ ಹೆಚ್ಚಳವಾಗಿದೆ. ಈ ಮೂಲಕ ಇದೀಗ ಭಾರತದಲ್ಲಿ ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ 20 ಸೋಂಕಿತರ ಪೈಕಿ 10 ಮಂದಿ ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ. ಅಂತರರಾಷ್ಟ್ರೀಯ ಪ್ರವಾಸ ಮಾಡಿ ಹಲವು ಪ್ರಯಾಣಿಕರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದು ಇದರಿಂದ ಸೋಂಕಿತರು ಹೆಚ್ಚುತ್ತಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳುತ್ತಾರೆ.
ದೆಹಲಿಯಲ್ಲಿ ನಿನ್ನೆ ಒಂದೇ ದಿನ 10 ಮಂದಿಯಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಮೂಡಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, 40 ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ರಾಜಸ್ಥಾನದಲ್ಲಿ 17, ಕರ್ನಾಟಕ, ತೆಲಂಗಾಣದಲ್ಲಿ 8 ಪ್ರಕರಣ ದಾಖಲಾಗಿವೆ. ಇದರ ಜೊತೆಗೆ ಗುಜರಾತ್, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲೂ ಹೊಸ ರೂಪಾಂತರ ವರದಿಯಾಗಿವೆ.










