ದೆಹಲಿಯಲ್ಲೊಬ್ಬ ಪಾಳೆಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ.. ಭಲೇ ಜೋಡಿ!

96
Firstsuddi

ಬೆಂಗಳೂರು : ರಾಜ್ಯದಲ್ಲಿ ನೈಟ್ ಕರ್ಪ್ಯೂವನ್ನು ಜಾರಿಗೊಳಿಸುವ ಸರ್ಕಾರದ ಕ್ರಮ ಕೊರೊನಾ ಓಡಿಸಲು ತಟ್ಟೆ ಬಡಿಯುವ ಮೋದಿಯವರ ಕರೆಯಷ್ಟೇ ಬಾಲಿಷ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ದೆಹಲಿಯಲ್ಲೊಬ್ಬರು ಪಾಳೆಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ! ಭಲೇ ಜೋಡಿ ಎಂದು ಸಿದ್ದರಾಮಯ್ಯನವರು ಟೀಕಿಸಿದ್ದಾರೆ.

ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ? ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ನೈಟ್ ಕರ್ಪ್ಯೂವಿನ ನಾಟಕ ಯಾಕೆ?. ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರುತ್ತಿದೆ. ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ. ದೇಶದ ಪ್ರಧಾನಿಯ ಅಂಧಾ ದರ್ಬಾರ್‌ನಿಂದ ರಾಜ್ಯದ ಮುಖ್ಯಮಂತ್ರಿಗಳು ಸ್ಫೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲ ಜಿಲ್ಲಾಧಿಕಾರಿಗಳು ಕೋವಿಡ್ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸ್ವಲ್ಪ ಬುದ್ಧಿ ಕಲಿಯಿರಿ, ಅವರಿಗೂ ಸ್ವಲ್ಪ ಬುದ್ಧಿ ಹೇಳಿ ಎಂದಿದ್ದಾರೆ.