ನವದೆಹಲಿ : ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್ ತುರಾತುರಿಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ವಿಮಾನ ಎಂಜಿನ್ ವೊಂದರಲ್ಲಿ ಬೆಂಕಿ ಹೊತ್ತಿಕೊಂಡು, ದೊಡ್ಡ ಪ್ರಮಾಣದಲ್ಲಿ ಬೆಂಕಿಯ ಕಿಡಿಗಳು ಚಿಮ್ಮುತ್ತಿರುವುದನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಮಾನದಲ್ಲಿ 177 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಇದ್ದರು. ಎಂಜಿನ್ ಗೆ ಬೆಂಕಿ ಹೊತ್ತಿಕೊಂಡಾಗ ವಿಮಾನ ಟೇಕಾಫ್ ಆಗಿತ್ತು. ಇದರ ಬೆನ್ನಲ್ಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರಕಟಣೆ ಹೊರಡಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6E 2131 ವಿಮಾನದ ಎಂಜಿನ್ ನಲ್ಲಿ ಟೇಕಾಫ್ ಆಗುವ ವೇಳೆ ದೋಷ ಕಾಣಿಸಿಕೊಂಡಿತು. ವಿಮಾನ ಟೇಕಾಫ್ ಆಗುವುದನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನವು ಸುರಕ್ಷಿತವಾಗಿ ನಿಲುಗಡೆ ಜಾಗವನ್ನು ತಲುಪಿದೆ. ಎಲ್ಲ ಪ್ರಯಾಣಿಕರಿಗೂ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದೆ.










