ತಿರುವನಂತಪುರಂ: ದೇವಸ್ಥಾನಗಳಲ್ಲಿ ಗರ್ಭಗುಡಿ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರು ಮೇಲಂಗಿ ಕಳಚುವ ದೀರ್ಘಕಾಲದ ಪದ್ಧತಿಗೆ ಕೇರಳದ ದೇವಸ್ವಂ ಮಂಡಳಿಗಳು ಕೈಬಿಡಲು ಚಿಂತಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದರು. ಮೇಲಂಗಿ ತೆಗೆಯುವ ಸಂಪ್ರದಾಯ ಸಾಮಾಜಿಕವಾಗಿ ಅನಿಷ್ಟವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸ್ಥಾಪಿತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಹೇಳಿದ ಹೇಳಿಕೆಯಿಂದ ಸಿಎಂ ಪಿಣರಾಯಿ ವಿಜಯನ್ ಈ ಕುರಿತು ಮಾತನಾಡಿರುವುದು ಗಮನಾರ್ಹವಾಗಿದೆ. ಮಂಗಳವಾರ ಶಿವಗಿರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ವಿಜಯನ್, ಶ್ರೀಗಳ ಕರೆಗೆ ಸಹಮತ ವ್ಯಕ್ತಪಡಿಸಿದ್ದರು. ನಿನ್ನೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಪಿಣರಾಯಿ ವಿಜಯನ್, ಇಂದು ದೇವಸ್ವಂ ಮಂಡಳಿ ಸದಸ್ಯರು ನನ್ನನ್ನು ಭೇಟಿಯಾಗಿ ಮೇಲಂಗಿ ತೆಗೆಯುವ ಆಚರಣೆಯ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು. ಇದು ಉತ್ತಮವಾದ ವಿಚಾರವೆಂದು ಹೇಳಿದ್ದೇನೆ. ಯಾವ ದೇವಸ್ವಂ ಮಂಡಳಿ ಈ ನಿರ್ಧಾರ ಜಾರಿ ಮಾಡುತ್ತದೆ ಎಂಬ ಬಗ್ಗೆ ನಿರ್ದಿಷ್ಟವಾಗಿ ಮಾಹಿತಿ ತಿಳಿದಿಲ್ಲ ಎಂದು ಹೇಳಿದರು.










