ದೇಶದಲ್ಲಿ ಇದೇ ಮೊದಲು – ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆ…

42
firstsuddi

ಶ್ರೀನಗರ : ದೇಶದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಲಿಥಿಯಂ ನಾನ್-ಫೆರಸ್ ಲೋಹವಾಗಿದೆ ಮತ್ತು ಇದು ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 59 ಲಕ್ಷ ಟನ್ ಗಳಷ್ಟು ಲಿಥಿಯಂ ನಿಕ್ಷೇಪವಿರುವುದು ಕಂಡುಬಂದಿದೆ. ಲಿಥಿಯಂ ಹಾಗೂ ಚಿನ್ನ ಸೇರಿದಂತೆ 51 ಖನಿಜ ಬ್ಲಾಕ್ ಗಳನ್ನ ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಣಿ ಸಚಿವಾಲಯ ನಿನ್ನೆ ತಿಳಿಸಿದೆ.

ಪ್ರಸ್ತುತ ಭಾರತವು ಲಿಥಿಯಂ, ನಿಕ್ಕಲ್ ಮತ್ತು ಕೋಬಾಲ್ಟ್ ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ. 7,897 ದಶಲಕ್ಷ ಟನ್ ನಷ್ಟಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ವರದಿಗಳನ್ನ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ.

ನವದೆಹಲಿಯಲ್ಲಿ ನಡೆದ 62ನೇ ಕೇಂದ್ರ ಭೂಗರ್ಭಶಾಸ್ತ್ರ ಪ್ರೋಗ್ರಾಮಿಂಗ್ ಬೋರ್ಡ್ ನ ಸಭೆಯಲ್ಲಿ ಮಾತನಾಡಿದ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ ಅಥವಾ ಸೋಲಾರ್ ಪ್ಯಾನಲ್ ಆಗಿರಲಿ ಎಲ್ಲದಕ್ಕೂ ಖನಿಜ ಬೇಕಾಗುತ್ತವೆ. ಸ್ವಾವಲಂಬಿಯಾಗಲು ದೇಶವು ನಿರ್ಣಾಯಕ ಖನಿಜಗಳನ್ನ ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.