ದೇಶಾದ್ಯಂತ ಆಸ್ತಿ ಕಬಳಿಸಲು ಕೇಂದ್ರದಿಂದ ವಕ್ಫ್ ತಿದ್ದುಪಡಿ ಮಸೂದೆ: ಮುಸ್ಲಿಂ ಕಾನೂನು ಮಂಡಳಿ.

35

ಬೆಂಗಳೂರು: ದೇಶಾದ್ಯಂತ ವಕ್ಫ್ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಸಿದ್ಧಪಡಿಸಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇಂದು ಆರೋಪಿಸಿದೆ. ವಕ್ಫ್ ಕುರಿತ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಸಹ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎಂದು ಎಐಎಂಪಿಎಲ್‍ಬಿ ವಕ್ತಾರ ಎಸ್ ಕ್ಯೂ ಆರ್ ಇಲ್ಯಾಸ್ ದೂರಿದ್ದಾರೆ. ಬೆಂಗಳೂರಿನಲ್ಲಿ ಇಂದು ಮುಕ್ತಾಯಗೊಂಡ ಎಐಎಂಪಿಎಲ್‍ಬಿಯ 29ನೇ ಸಮಾವೇಶದ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಇಲ್ಯಾಸ್, ದೇಶದಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ಕಬಳಿಸಲು ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಕುತಂತ್ರದಿಂದ ಸಿದ್ಧಪಡಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಲ್ಲಾ ಪ್ರಸ್ತಾವಿತ 44 ತಿದ್ದುಪಡಿಗಳು ಮತ್ತು ಅವುಗಳ ಉಪ-ವಿಭಾಗಗಳನ್ನು ವಕ್ಫ್ ಆಸ್ತಿಗಳನ್ನು ಕಬಳಿಸಲು ಅತ್ಯಂತ ಜಾಣ್ಮೆಯಿಂದ” ಮಸೂದೆ ವಿನ್ಯಾಸಗೊಳಿಸಲಾಗಿದೆ ಎಂದು ಇಲ್ಯಾಸ್, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಬಂಧಪಟ್ಟವರ ಸಲಹೆಗಳನ್ನು ಪಡೆಯಲು ರಚಿಸಲಾದ ಜೆಪಿಸಿ, ಈ ವಿಷಯದ ಬಗ್ಗೆ ಯಾವುದೇ ಸ್ಥಾನಮಾನವಿಲ್ಲದವರಿಗೆ ಸಮಯ ಮತ್ತು ಗಮನವನ್ನು ನೀಡುತ್ತಿದೆ ಮತ್ತು ಪಕ್ಷಪಾತಿಯಾಗಿ ವರ್ತಿಸುತ್ತಿದೆ. ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ಹೇಳಿದ್ದಾರೆ.