ಬಳ್ಳಾರಿ: ಯುವಕ ಪ್ರೀತಿ ಪ್ರೇಮದ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾನೆ ಎಂದು ಮನನೊಂದು ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೃತಳನ್ನು ಅಮೃತಾ ಎಂದು ಗುರುತಿಸಲಾಗಿದೆ. ಈಕೆ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಆಗಷ್ಟೇ ಪಿಯುಸಿ ಮುಗಿಸಿದ್ದ ಅಮೃತ. ಸ್ನೇಹಿತೆಯ ಗಂಡನ ಸಹೋದರನಾದ ಸುನೀಲ್ ಜೊತೆ ಪರಿಚಯವಾಗಿತ್ತು. ಪರಿಚಯವು ಪ್ರೀತಿಗೆ ತಿರುಗಿದೆ. ಪ್ರೇಮ ಪ್ರಣಯ ಹೀಗೆ ಎಲ್ಲಾ ರೀತಿಯಲ್ಲಿ ಬಳಸಿಕೊಂಡ ಬಳಿಕ ಮದುವೆಯಾಗಲು ನಿನ್ನ ಜಾತಿ ಬೇರೆ ಎಂದು ಸುನೀಲ್ ನಿರಾಕರಿಸಿದ್ದ. ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅಮೃತಾ ನೇಣಿಗೆ ಶರಣಾಗಿದ್ದಳು.
ಅಮೃತ (ವಡ್ಡರ) ತಳ ಸಮುದಾಯಕ್ಕೆ ಸೇರಿದ ಯುವತಿಯೆಂದು ಸುನೀಲ್ (ಬಲಿಜ) ಮೇಲ್ಜಾತಿಗೆ ಸೇರಿದ್ದವರೆಂದು ಮದುವೆ ಬೇಡ ಎಂದಿರುವ ಆರೋಪ ಕೇಳಿಬಂದಿದೆ. ಸ್ನೇಹ, ಪ್ರೀತಿ, ಹಾಸಿಗೆ ಹಂಚಿಕೊಳ್ಳುವಾಗ ಇರದ ಜಾತಿ ಮದುವೆಯಾಗೋವಾಗ ಏಕೆ ಬಂತು ಎಂಬುದು ಯುವತಿಯ ಪ್ರಶ್ನೆಯಾಗಿತ್ತು.
ಯುವತಿ ಅಮೃತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೈಕೊಟ್ಟ ಹುಡುಗನ ಮೋಸದ ಕತೆ ಪತ್ರದ ಮೂಲಕ ಬರೆದಿಟ್ಟಿದ್ದಳು. ಮದುವೆ ನಿರಾಕರಿಸಿದ ಯುವಕ ಸುನಿಲ್ ಮಾಡಿದ ಅತ್ಯಾಚಾರ ಮತ್ತು ಅವರ ಕುಟುಂಬದವರು ಮಾಡಿದ ನಿಂದನೆ ಬಗ್ಗೆಯೂ ಅಮೃತಾ ಪತ್ರದಲ್ಲಿ ತಿಳಿಸಿದ್ದಾಳೆ.
ಸದ್ಯ ಪ್ರಕರಣ ಸಂಬಂಧ ಆರೋಪಿ ಸುನೀಲ್ ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.










