ಬೆಂಗಳೂರು : ಕೊರೊನಾದಿಂದಾಗಿ ಇದೇ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಇತ್ತ ಫಲಿತಾಂಶ ತೃಪ್ತಿ ನೀಡದೇ ಇದ್ದರೆ ಪರೀಕ್ಷೆಯನ್ನ ಬರೆಯಬಹುದು ಅಂತ ಪಿಯು ಬೋರ್ಡ್ ತಿಳಿಸಿತ್ತು. ಅದರಂತೆ ಫಲಿತಾಂಶ ತಿರಸ್ಕರಿಸಿದವರಿಗೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳ ರಿಸಲ್ಟ್ ಪ್ರಕಟವಾಗಿದೆ.
ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 18,413 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5,507 ಮಕ್ಕಳು ತೇರ್ಗಡೆ ಹೊಂದಿದ್ದು, 12,906 ಮಕ್ಕಳು ಅನುತ್ತೀರ್ಣರಾಗಿದ್ದಾರೆ ಎಂದರು.
ಹೊಸದಾಗಿ 592 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ತೇರ್ಗಡೆಯಾದವರು- 556, ಅನುತ್ತೀರ್ಣ – 36, ಹಾಗೆಯೇ 351 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 183 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 168 ಜನ ಅನುತ್ತೀರ್ಣರಾಗಿದ್ದಾರೆ. ಇನ್ನು ಖಾಸಗಿ ಅಭ್ಯರ್ಥಿಗಳು 17,470 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 4,768 ಜನ ತೇರ್ಗಡೆ ಹೊಂದಿದ್ದು, 12,702 ಮಂದಿ ಅನುತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 600ಕ್ಕೆ 573 ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600 ಅಂಕಕ್ಕೆ 592 ಅತಿ ಹೆಚ್ಚು ಅಂಕ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅತಿ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ನಾಗೇಶ್ ತಿಳಿಸಿದರು.
ವಿದ್ಯಾರ್ಥಿಗಳು http://karresults.nic.in ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು.










