ನನ್ನ ಕೊಲೆಗೆ ಸಂಚು – ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್ ಆರೋಪ…

61
firstsuddi

ಕಲಬುರಗಿ : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯಿಂದ ನನಗೆ ಕೊಲೆ ಬೆದರಿಕೆ ಇದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಈ ಬಗ್ಗೆ ಆಡಿಯೋ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಕಂಠ ರಾಠೋಡ್, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಅವರ ಸಂಗಡಿಗರು  ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ. ಶಾಸಕರ ಹೆಸರು ಬರಬಾರದು ಎಂದು ಜಮೀನು ವಿವಾದದಲ್ಲಿ ನನ್ನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ ಎಂದು ರಾಠೋಡ್ ಹೇಳಿದರು.

ಕೊಲೆ ಮಾಡೋದಕ್ಕೆ 2 ದೇಶಿ ನಿರ್ಮಿತ ಪಿಸ್ತೂಲ್, 30 ಬುಲೆಟ್ ಗಳನ್ನು ಖರೀದಿಸಿದ್ದಾರೆ. ಆದರೆ ದೇಶಿ ನಿರ್ಮಿತ ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು, ಗನ್ ಕೇಸ್ ನಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಹೆಸರು ತೆಗೆಯೋದಕ್ಕೆ ಡಿವೈಎಸ್ಪಿ 10 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಕಲಬುರಗಿ ಪೊಲೀಸ್ ಕಮಿಷನರ್ ಎನ್.ರವಿಕುಮಾರ್ ಪತ್ನಿ ದಾಂಡಿಯಾ ನೈಟ್ ಹೆಸರಿನಲ್ಲಿ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ಕಮಿಷನರ್ ಪತ್ನಿ ಮಾತಾಡಿರುವ ಆಡಿಯೋ ಸಹ ಬಿಡುಗಡೆ ಮಾಡಿದ್ದಾರೆ.

ಈ ಆರೋಪ ತಳ್ಳಿ ಹಾಕಿರುವ ಪೊಲೀಸ್ ಆಯುಕ್ತ ಎನ್.ರವಿಕುಮಾರ್ ದಾಂಡಿಯಾ ಕಾರ್ಯಕ್ರಮ ಮಾಡಿದ್ದು ನಿಜ. ಆದರೆ ಹಣ ನೀಡಲೇಬೇಕು ಅಂತಾ ಡಿಮ್ಯಾಂಡ್ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.