ನಬಾರ್ಡ್ ಪುನರ್ಧನ ಕಡಿತದ ಪರಿಣಾಮ ರೈತರಿಗೆ ಭಾರಿ ತೊಂದರೆ: ಸಚಿವ ಕೆ.ಎನ್ ರಾಜಣ್ಣ.

36

ಬೆಂಗಳೂರು: ಕೃಷಿ ಸಾಲದ ಪುನರ್ಧನ ಮಿತಿಯನ್ನು ನಬಾರ್ಡ್ ಹಠಾತ್ ಇಳಿಕೆ ಮಾಡಿದೆ. ನಬಾರ್ಡ್ ಕೇಂದ್ರ ಸರ್ಕಾರದ ಅಧೀನದಲ್ಲೇ ಬರುವುದರಿಂದ ಕೇಂದ್ರ ಸರ್ಕಾರವೇ ದ್ವೇಷದ ಕಾರಣಕ್ಕೆ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಈ ವರ್ಷ 9,200 ಕೋಟಿ ರೂ. ಧನ ಸಹಾಯ ಕೇಳಿದ್ದೇವು, ಕಳೆದ ವರ್ಷಕ್ಕಿಂತ ಹೆಚ್ಚು ಹಣ ಸಿಗುವ ನಿರೀಕ್ಷೆಯಲ್ಲಿದ್ದೆವು. ಕರ್ನಾಟಕಕ್ಕೆ 2,340 ಕೋಟಿ ದೊರೆತಿದ್ದು, ಕಳೆದ ವರ್ಷದ 5,600 ಕೋಟಿಗಿಂತ ಶೇ.58 ರಷ್ಟು ಕಡಿಮೆಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಇದರಿಂದ ರೈತರಿಗೆ ಒದಗಿಸಲಾದ ಬಡ್ಡಿರಹಿತ ಸಾಲದ ಮೇಲೆ ಪರಿಣಾಮ ಬೀರುತ್ತದೆ, ಅವರು ಖಾಸಗಿ ಲೇವಾದೇವಿದಾರರ ಮೊರೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ. ನಬಾರ್ಡ್ ರಾಜ್ಯಕ್ಕೆ ಶೇ.4.5 ರ ಬಡ್ಡಿದರದಲ್ಲಿ ಸಬ್ಸಿಡಿ ದರದಲ್ಲಿ ಹಣವನ್ನು ನೀಡುತ್ತಿದೆ. ಆ ನಿಧಿಗಳೊಂದಿಗೆ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಬ್ಯಾಂಕ್‍ಗಳು ಮತ್ತು ಪ್ರಾಥಮಿಕ ಕೃಷಿ ಸಾಲ ಸಂಘಗಳು 35 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿವೆ ಎಂದು ಅವರು ಹೇಳಿದರು.