ಶಿವಮೊಗ್ಗ: ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ವಿಷಯದಲ್ಲಿ ಧಾರ್ಮಿಕ ಭಾವನೆ ಕೆರಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧಿಸಿದಂತೆ ಮಕ್ಕಳು ಧಾರ್ಮಿಕವಾಗಿ ಪರಿಣಾಮ ಬೀಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಎನ್ಎಸ್ಯುಐ ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಸಿಆರ್ಪಿಸಿ ಕಲಂ 157 ಅಡಿ ಎಫ್ಐಆರ್ ದಾಖಲಾಗಿದೆ.
ಸೂಲಿಬೆಲೆ ಹೇಳಿದ್ದೇನು?
ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಸಮಯಾವಕಾಶ ನೀಡಲು ಬೆಳಗ್ಗಿನ ಪರೀಕ್ಷೆಗಳನ್ನು ಮಧ್ಯಾಹ್ನದ ನಂತರ ನಿಗದಿ ಮಾಡಲಾಗಿದೆ ಎಂಬ ಬಲಪಂಥೀಯರು ಟೀಕಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಟ್ವಿಟರ್) ವೇಳಾಪಟ್ಟಿ ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗಿನ ಅವಧಿಯಲ್ಲಿ ನಡೆಯಲಿದೆ. ಶುಕ್ರವಾರ ಮಾತ್ರ ಯಾಕೆ ಮಧ್ಯಾಹ್ನದ ನಂತರ ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಮಾಜ್ಗೆ ಸಮಯವೇ ಎಂದು ಪ್ರಶ್ನಿಸಿದ್ದರು.
ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಸ್ಪಷ್ಟನೆ ನೀಡಿದ ಪರೀಕ್ಷಾ ಮಂಡಳಿ, ಮಾರ್ಚ್ 1ರಂದು ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಬೆಳಗ್ಗೆ ನಡೆಯುವ ಕಾರಣ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಿಗದಿಮಾಡಲಾಗಿದೆ. ನಮಾಜ್ಗೆ ಅನುಕೂಲ ಮಾಡಿಕೊಡಲು ಮಧ್ಯಾಹ್ನ ಪರೀಕ್ಷೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.










