ನಮ್ಮ ಅನ್ನಧಾತರು ಘನತೆಯಿಂದ ಬಾಳುವಂತಾಗಬೇಕು : ಸುಮಲತಾ ಅಂಬರೀಶ್…

395
firstsuddi

ನವದೆಹಲಿ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಸಂಸತ್‍ನಲ್ಲಿ ಮೊದಲ ಬಾರಿಗೆ ಮಾತನಾಡಿದ್ದು, ಕನ್ನಡದಲ್ಲೇ ಮಾತು ಆರಂಭಿಸಿದ ಅವರು ಮಂಡ್ಯ ಸ್ವಾಭಿಮಾನಿ ಜನರಿಗೆ ಧನ್ಯವಾದಗಳು ಎಂದು ಹೇಳಿದರು. ಮಂಡ್ಯದಲ್ಲಿ ನೀರಿನ ಸಮಸ್ಯೆ ಎದುರಾಗಿ ತೀವ್ರ ಬರದ ಸ್ಥಿತಿ ಉಂಟಾಗಿದ್ದು, ಕಬ್ಬು ಬೆಳೆಗಾರರು ಹಾಗೂ ಭತ್ತದ ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ರೈತರ ನೆರವಿಗೆ ಧಾವಿಸಬೇಕು. ಮಂಡ್ಯ ರೈತರು ಈಗಾಗಲೇ ಅವರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್‍ನಿಂದ ಪಡೆದ ಸಾಲವನ್ನು ತೀರಿಸಲಾಗದೆ ಹಾಗೂ ರಾಜ್ಯ ಸರ್ಕಾರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಲಶಕ್ತಿ ಸಚಿವರು ಮಂಡ್ಯ ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಬೇಕು. ನೀರಿನ ಸಮಸ್ಯೆಯಿಂದಾಗಿ ಜಾನುವಾರುಗಳಿಗೆ ಮೇವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಈ ರೀತಿ ತೊಂದರೆಗಳಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಬೇಕು. ನಮ್ಮ ಅನ್ನಧಾತರು ಘನತೆಯಿಂದ ಬಾಳುವಂತಾಗಬೇಕು ಎಂದು ಹೇಳಿದರು.