ನಾವು ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಹಸಿರನ್ನು ಬೆಳೆಸದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ :ಬಿ.ಎಚ್. ನರೇಂದ್ರ ಪೈ

75
firstsuddi

ಚಿಕ್ಕಮಗಳೂರು: ನಮ್ಮ ಮುಂದಿನ ಪೀಳಿಗೆ, ಮಳೆ-ಬೆಳೆ ಸಮೃದ್ಧವಾಗಿ ನೆಮ್ಮದಿಯಿಂದ ಬದುಕಬೇಕಾದರೆ, ನಾವು ಈಗಿನಿಂದಲೇ ಗಿಡ ಮರಗಳನ್ನು ನೆಟ್ಟು ಹಸಿರನ್ನು ಬೆಳೆಸಬೇಕು ಎಂದು ಮಾಜಿ ಶಾಸಕ ಐ.ಬಿ. ಶಂಕರ್ ಸಲಹೆ ಮಾಡಿದರು.

ನಗರದ ಭಾರತ ಸೇವಾದಳದ ಜಿಲ್ಲಾ ಕಚೇರಿ ಆವರಣದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರು ಪರಿಸರವನ್ನು ದೇವರೆಂದು ಪೂಜಿಸುತ್ತಿದ್ದರು. ಗಿಡ ಮರಗಳನ್ನು ನೆಟ್ಟುದಟ್ಟ ಕಾಡುಗಳನ್ನು ಬೆಳೆಸಿದ್ದರು. ಹಾಗಾಗಿ ಆ ಕಾಲದಲ್ಲಿ ಸಕಾಲಕ್ಕೆ ಮಳೆ, ಬೆಳೆಯಾಗಿ ನಾಡು ಸಮೃದ್ಧಿಯಾಗಿತ್ತು ಎಂದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಮಿತಿಮೀರಿದ ದುರಾಸೆ ಮತ್ತು ಸ್ವಾರ್ಥದಿಂದಾಗಿ ಕಾಡುಗಳನ್ನು ಕಡಿದು ನಾಶ ಮಾಡಿದ್ದೇವೆ. ಜಲ ಮೂಲಗಳನ್ನು ಹಸಿರನ್ನು ಇಲ್ಲವಾಗಿಸಿದ್ದೇವೆ. ಇದರಿಂದಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಚ್. ನರೇಂದ್ರ ಪೈ, ನಾವು ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಹಸಿರನ್ನು ಬೆಳೆಸದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಸುಂದರ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ಮರಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪರಿಸರ ದಿನಾಚರಣೆ ಅಂಗವಾಗಿ ಕಚೇರಿ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಇದೇ ವೇಳೆ ಭಾರತ ಸೇವಾದಳದ ಜಿಲ್ಲಾ ಕಾರ್ಯಕಾರಿ ಸಮಿತಿಯ ಯೋಜನಾ ಸಭೆ ನಡೆಯಿತು

ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಬಸವರಾಜಪ್ಪ, ಖಜಾಂಚಿ ಜಗದೀಶಾಚಾರ್, ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ, ತಾಲೂಕು ಅಧ್ಯಕ್ಷ ಜಿ. ಶಂಕರ್, ಸದಸ್ಯೆ ಉಮಾ ಐ.ಬಿ. ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀಕ್ಷಕಿ ಅರುಣಕುಮಾರಿ ಉಪಸ್ಥಿತರಿದ್ದರು.