ಕೋಲಾರ : ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಯುವಕರಿಗೆ 2ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಮೋದಿ 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೀನಿ ಎಂದು ಹೇಳಿದ್ದರು. ಆದರೆ ಯಾವಾ ಭರವಸೆಯನ್ನು ಅವರು ಈಡೇರಿಸಲಿಲ್ಲ. ತಮ್ಮ ಭರವಸೆಗಳ ಬಗ್ಗೆ ಯಾವುದೇ ಸಮಾವೇಶದಲ್ಲೂ ಮೋದಿ ಮಾತನಾಡುವುದಿಲ್ಲ. ರೈತರ ಸಮಸ್ಯೆ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ರೈತರ ಸಮಸ್ಯೆ ಬಗ್ಗೆ ಉಲ್ಲೇಖಿಸಿಲ್ಲ. ಕಾವಲುದಾರರು ಸುಳ್ಳು ಹೇಳುತ್ತಿದ್ದಾರೆ. ದೇಶದ ಜನತೆಗೆ ಮೋಸ ಮಾಡುತ್ತಿದ್ದಾರೆ. ನಿಮ್ಮ ಜೇಬಿನಲ್ಲಿರುವ ಹಣ ತೆಗೆದು ನೀರವ್ ಮೋದಿಗೆ ನೀಡಿದದರು. ಚೋಕ್ಸಿ, ಲಲಿತ್ ಮೋದಿ, ಸೇರಿದಂತೆ ಎಲ್ಲ ಕಳ್ಳರು ನಿಮ್ಮ ಹಣ ತೆಗೆದುಕೊಂಡು ವಿದೇಶಕ್ಕೆ ಹೋದರು. ಇದರಿಂದಾಗಿ ನಾವು ಲೋಕಸಭಾ ಚುನಾವಣೆಯ ಅಂಗವಾಗಿ ಐದು ತಿಂಗಳ ಹಿಂದೆಯೇ ನಾವು ಯಾಕೆ ರೈತರ ಖಾತೆಗೆ ಹಣ ಹಾಕಬಾರದೆಂದು ಯೋಚಿಸಿದ್ದೇವೆ. ನಿಖರವಾಗಿ ರೈತರ ಖಾತೆಗೆ ಎಷ್ಟು ಹಣ ಹಾಕಬಹುದು ಎಂಬುದರ ಅಂಕಿ-ಅಂಶ ನೀಡಬೇಕೆಂದು ಕೇಳಿಕೊಂಡಿದ್ದೆ. ನಿಖರ ಅಂಕಿ ಅಂಶಗಳ ಪ್ರಕಾರ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ, ವರ್ಷಕ್ಕೆ 72 ಸಾವಿರ ನೀಡಲು ಸಾಧ್ಯ ಎಂಬುವುದು ತಿಳಿದಿದೆ. ಅದೇ ಅಂಕಿ-ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇವೆ.
ಮೋದಿ ಸರ್ಕಾರ 15ಲಕ್ಷ ರೂಗಳನ್ನು ಖಾತೆಗೆ ಹಾಕುವುದು ಸುಳ್ಳು ಎಂದು ಅಂದುಕೊಂಡಿದ್ದೆವು. ಆದರೆ ನಾವು ಆ ರೀತಿ ಮಾಡುವುದಿಲ್ಲ ನಿಮ್ಮ ಖಾತೆಗೆ ಹಣವನ್ನು ಹಾಕುತ್ತೇವೆ. ಅಂಬಾನಿ ಹಾಗೂ ಮಲ್ಯರಂತಹ ಉದ್ಯಮಿಗಳು ಬ್ಯಾಂಕ್ನಿಂದ ಸಾಲದ ರೂಪದಲ್ಲಿ ಹಣವನ್ನು ಪಡೆದರು. ಆದರೆ ಅವರು ಸಾಲಮರುಪಾವತಿ ಮಾಡಲಿಲ್ಲ. ಅಂಬಾನಿಯನ್ನು ಆಲಿಂಗನ ಮಾಡಿಕೊಂಡು ಫೋಟೋ ತೆಗೆದುಕೊಳ್ಳುವ ನೀವು ರೈತರನ್ನು ಮಾತನಾಡಿಸಲ್ಲ ಯಾಕೆ? ಎಂದು ಮೋದಿ ಅವರು ಮತ್ತೊಮ್ಮೆ ಭೇಟಿ ನೀಡಿದಾಗ ನೀವು ಪ್ರಶ್ನಿಸಬೇಕು. ನರೇಂದ್ರ ಮೋದಿಯವರು “ಮೇಕ್ ಇನ್ ಇಂಡಿಯಾ“ ಎಂದು ಹೇಳಿದ್ದರು. ಆದರೆ ಅವರು ಯುವಕರಿಗಾಗಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಲಕ್ಷ ಸರ್ಕಾರಿ ಉದ್ಯೋಗವನ್ನು ಭರ್ತಿ ಮಾಡುತ್ತೇವೆ. ಪಂಚಾಯಿತಿ ಮಟ್ಟದಲ್ಲಿ 10ಲಕ್ಷ ಉದ್ಯೋಗವನ್ನು ಕೊಡಿಸುತ್ತೇವೆ. ನೋಟ್ ಬ್ಯಾನ್ ಹಾಗೂ ಜಿಎಸ್ಟಿಯಿಂದಾಗಿ ಸಣ್ಣ ಉದ್ಯಮಿಗಳು ಬಹಳ ತೊಂದರೆ ಅನುಭವಿಸಿದರು. ನಮ್ಮ ಸರ್ಕಾರ ಬಂದರೆ 3ವರ್ಷ ಸಣ್ಣ ಉದ್ಯಮ ಸ್ಥಾಪಿಸುವವರಿಗೆ ಯಾವುದೇ ಪರವನಾಗಿ ಇರುವುದಿಲ್ಲ. ಉದ್ಯಮ ಸ್ಥಾಪಿಸಲೆಂದೇ ನಾವು ಸಾಲ ಸೌಲಭ್ಯವನ್ನು ನೀಡುತ್ತೇವೆ. ನ್ಯಾಯ ಯೋಜನೆಯಡಿ ಶೇಕಡಾ 33ರಷ್ಟು ಮಹಿಳೆಯರ ಖಾತೆಗೆ ಹಣ ಹಾಕುತ್ತೇವೆ ಎಂದರು.










