ನಾಗರೀಕರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಐ.ಬಿ.ಶಂಕರ್.

84
firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ 9 ಲಕ್ಷ ಜನರ ಸಮಗ್ರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸೇವಾದಳದ ಜಿಲ್ಲಾ ಘಟಕ ಮತ್ತು ಕೆನರಾ ಬ್ಯಾಂಕ್ ನಗರ ಹೊರವಲಯದ ಅನ್ನಪೂರ್ಣ ವೃದ್ದಾಶ್ರಮದಲ್ಲಿ ನಿನ್ನೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಗ್ರ ಆರೋಗ್ಯ ತಪಾಸಣೆಗೊಳಗಾದವರಲ್ಲಿ 1 ಲಕ್ಷದ 10 ಸಾವಿರ ಜನ ಕ್ಯಾನ್ಸರ್, ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ, 58 ಸಾವಿರ ಜನ ಸಕ್ಕರೆ ಖಾಯಿಲೆ, 46 ಸಾವಿರ ಜನ ರಕ್ತದೊತ್ತಡ ಹಾಗೂ 1200 ಜನ ಕ್ಯಾನ್ಸರ್ ರೋಗಿಗಳಿದ್ದಾರೆ ಎಂದು ತಿಳಿಸಿದರು.

ಅಷ್ಟೂ ಜನರ ಮನೆ ಬಾಗಿಲಿಗೆ ಪ್ರತಿ ತಿಂಗಳೂ ಉಚಿತವಾಗಿ ಔಷಧಿಯನ್ನು ತಲುಪಿಸಲಾಗುತ್ತಿದೆ, ಜಿಲ್ಲೆಯ 55 ಸಾವಿರ ಜನರಿಗೆ 40 ಕೋಟಿ ರೂ ವೆಚ್ಚದಲ್ಲಿ ಆರೋಗ್ಯ ಕಾರ್ಡ್‍ನಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದರು.

ಮಾಜಿ ಶಾಸಕ ಐ.ಬಿ.ಶಂಕರ್ ಮಾತನಾಡಿ ಹಿರಿಯ ನಾಗರೀಕರು ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಶಿಬಿರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವೃದ್ದಾಶ್ರಮದ ನಿವಾಸಿಗಳಿಗೆ ಸೇವಾದಳದಿಂದ ಬೆಡ್‍ಶೀಟ್, ಟೋಪಿ, ಹ್ಯಾಂಡ್ ಗ್ಲೌಸ್, ಹಣ್ಣು ಮತ್ತು ಮಧ್ಯಾಹ್ನದ ಊಟ ವಿತರಿಸಲಾಯಿತು.

ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ವಿದ್ಯಾಸಾಗರ್ ಮತ್ತು ಮಲ್ಲಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಚೇತನ ವೃದ್ದಾಶ್ರಮದ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಿದರು.

ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಸ್.ಟಿ.ವಿನಯಕುಮಾರ್, ಭಾರತ ಸೇವಾದಳದ ಕಾರ್ಯದರ್ಶಿ ಹಂಪಯ್ಯ , ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಈರೇಗೌಡ, ಕನಕರಾಜು, ಎಲ್.ಬಸವರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ|| ಸೀಮಾ ಉಪಸ್ಥಿತರಿದ್ದರು.