ನಾನು ಎಲ್ಲಿಯೂ ಓಡಿ ಹೋಗಿಲ್ಲ, ಬೆಂಗಳೂರು ನನಗೆ ಮನೆ ಇದ್ದಂತೆ : ಸ್ವತಃ ಹಿತೇಶಾ ಚಂದ್ರಾಣಿ ಸ್ಪಷ್ಟನೆ…

113
Firstsuddi

ಬೆಂಗಳೂರು : ನಾನು ಎಲ್ಲಿಯೂ ಓಡಿ ಹೋಗಿಲ್ಲ, ಬೆಂಗಳೂರು ನನಗೆ ಮನೆ ಇದ್ದಂತೆ ಎಂದು ಸ್ವತಃ ಹಿತೇಶಾ ಚಂದ್ರಾಣಿ ಅವರು ಸ್ಪಷ್ಟನೆ ನೀಡಿದ್ದಾರೆ.

ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಹಾಗೂ ಮಾಡೆಲ್ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಊಟವನ್ನು ತಡವಾಗಿ ಕೊಟ್ಟಿದ್ದಲ್ಲದೇ, ನನ್ನ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿದ್ದ ಯುವತಿ ಹಿತೇಶಾ ಚಂದ್ರಾಣಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಹಿತೇಶಾ ತಲೆಮರೆಸಿಕೊಂಡಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಇದಕ್ಕೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಕೆಲವು ಸೆಲೆಬ್ರಿಟಿಗಳು ಈ ಘಟನೆಗೆ ನಾನೇ ಕಾರಣವೆಂದು ಮನಸ್ಸು ನೋಯಿಸಿದ್ದಾರೆ. ಇದರಿಂದಾಗಿ ನನಗೆ ನಾನು ನೋಡಿದ್ದ ಜನರು ಇವರೇನಾ ಎಂಬ ಸಂಶಯ ಮೂಡುತ್ತಿದೆ. ಇತ್ತೀಚಿನ ಬೆಳವಣಿಗೆಯಿಂದ ಜೀವ ಬೆದರಿಕೆಯ ಭಯವಾಗುತ್ತಿದೆ. ಹಾಗಾಂತ ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ನನಗೆ ಮನೆ ಇದ್ದಂತೆ. ನನ್ನ ವಿರುದ್ಧ ಕೇಳಿ ಬರುತ್ತಿರುವ ಮಾತುಗಳು ಸುಳ್ಳು ಎಂದು ಪೋಸ್ಟ್ ಮಾಡಿದ್ದಾರೆ.

ನಾನು ಅನುಭವಿಸುತ್ತಿರುವ ಅನುಭವವನ್ನು ನೂರಾರು ಯುವತಿಯರು ಅನುಭವಿಸುತ್ತಿದ್ದಾರೆ. ಈ ಘಟನೆ ನಡೆದ ನಂತರ ನನಗೆ ಬೆದರಿಕೆ ಹಾಕಲಾಯಿತು. ನಾನು ನನ್ನ ಜೀವನವನ್ನು ಮತ್ತು ಗೌರವವನ್ನು ಯಾವುದೇ ಅಪಾಯಕ್ಕೆ ಒಳಪಡಿಸಲು ಇಷ್ಟ ಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.