ನಾನು ದಂಡ ಕಟ್ಟುವುದಿಲ್ಲ, ನಾನು ದಲಿತ ಮುಖಂಡ ಇದೀನಿ ಗೊತ್ತಾಯಿತಾ? – ಡಿಸಿಗೆ ಅವಾಜ್ ಹಾಕಿದ ವ್ಯಕ್ತಿ…

156
Firstsuddi

ಹುಬ್ಬಳ್ಳಿ : ಮಾಸ್ಕ್ ಧರಿಸದ ಮಹಿಳೆಯನ್ನು ಡಿಸಿ ಹಾಗೂ ತಹಸೀಲ್ದಾರರು ತಡೆದಿದ್ದಕ್ಕಾಗಿ ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆಯ ಪತಿ ಜಗಳವಾಡಿರುವ ಘಟನೆ ನಗರದ ಅರ್ಬನ್ ಓಯಾಸಿಸ್ ಮಾಲ್ವೊಂದರಲ್ಲಿ ನಡೆದಿದೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಹೆಚ್ಚು ಜನರಿರುವ ಪ್ರದೇಶಗಳಿಗೆ ಭೇಟಿ ನೀಡಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಸ್ಕ್ ಧರಿಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದಾರೆ. ನಿನ್ನೆ ನಗರದ ಅರ್ಬನ್ ಓಯಾಸಿಸ್ ಮಾಲ್ ಒಂದಕ್ಕೆ ಭೇಟಿ ನೀಡಿದರು. ಈ ವೇಳೆ, ಅಧಿಕಾರಿಗಳು ಮಾಸ್ಕ್ ಧರಿಸದವರನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಆಗ ಮಹಿಳೆಯೊಬ್ಬರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆಯ ಪತಿ ಅಧಿಕಾರಿಗಳೊಂದಿಗೆ ಜಗಳಕ್ಕಿಳಿದಿದ್ದಾರೆ.

ಮಾಸ್ಕ್ ಧರಿಸದಿರುವುದಕ್ಕೆ ದಂಡ ಕಟ್ಟುವುದಿಲ್ಲ. ನನ್ನ ಹೆಂಡತಿಯನ್ನು ಯಾಕೆ ತಡೆದಿದ್ದು? ನಾನು ದಲಿತ ಮುಖಂಡ ಇದೀನಿ ಗೊತ್ತಾಯ್ತ? ಎಂದು ಡಿಸಿಗೆ ಅವಾಜ್ ಹಾಕಿದ್ದರು. ಇದರಿಂದ ಕೋಪಗೊಂಡ ಅಧಿಕಾರಿಗಳು ವ್ಯಕ್ತಿಯನ್ನು ತಡೆದು ಮಹಿಳೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ಕಟ್ಟಲೇಬೇಕು. ಇಲ್ಲದಿದ್ದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಆಗ ನನ್ನ ಬಳಿ 150 ರೂಪಾಯಿ ಮಾತ್ರ ಇದೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅಧಿಕಾರಿಗಳು ವ್ಯಕ್ತಿಯ ಬಳಿಯಿಂದ ಕೊನೆಗೂ 250 ರೂ ದಂಡ ವಸೂಲಿ ಮಾಡಿದರು.