ನಾನು ಕಾಂಗ್ರೆಸ್ ಶಾಸಕನಾಗಿದ್ದಾಗ ಡಿಕೆಶಿಗೆ ಬೆಳಗಾವಿ ಪ್ರವೇಶಕ್ಕೆ ಬಿಟ್ಟಿಲ್ಲ: ರಮೇಶ್ ಜಾರಕಿಹೊಳಿ.

34

ಬೆಳಗಾವಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದ ವಿಚಾರವಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕ್ರೆಡಿಟ್ ಫೈಟ್ ನಡೆದಿದ್ದು, ಇದೀಗ ಇವರ ಮಧ್ಯ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರವೇಶ ಮಾಡಿದ್ದು, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕಚೇರಿ ನಿರ್ಮಾಣದಲ್ಲಿ ಸಾಕಷ್ಟು ಗೊಲ್ ಮಾಲ್ ಆಗಿದೆ. ನಾನು ಕಾಂಗ್ರೆಸ್ ಶಾಸಕನಾಗಿರುವಾಗ ಡಿ.ಕೆ ಶಿವಕುಮಾರ್ ನನ್ನು ಬೆಳಗಾವಿ ಜಿಲ್ಲೆಗೆ ಬರಲು ಬಿಟ್ಟಿಲ್ಲ. ನಾನು ಅಧಿಕಾರ ನಡೆಸಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಡಿ.ಕೆ ಶಿವಕುಮಾರ್ ಮಾತು ಕೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮೊನ್ನೆ ಕಾಂಗ್ರೆಸ್ ಪಕ್ಷದ ಸಿಎಲ್‍ಪಿ ಸಭೆ ನಡೆದಿತ್ತು. ಸನ್ಮಾನ್ಯ ಡಿ.ಕೆ ಶಿವಕುಮಾರ್ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದರು. ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಿದ್ದರು. ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾಗ ಪರಮೇಶ್ವರ್ ಅವರು ಆ ವೇಳೆ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಅಂತಾ ಡಿಕೆಶಿ ತಿಳಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ವಿರೋಧ ಮಾಡುವ ಶಕ್ತಿ ಕೊಟ್ಟಿದ್ದಕ್ಕೆ ಡಿ.ಕೆ ಶಿವಕುಮಾರ್ ರವರಿಗೆ ಧನ್ಯವಾದ ಹೇಳುತ್ತೇನೆ ಎಂದು ಟಾಂಗ್ ಕೊಟ್ಟರು.