ಬೆಂಗಳೂರು : ನಾನು ನಿರಪರಾಧಿ, ಇಂತಹ 10 ದೂರುಗಳು ಬಂದ್ರೂ ನಾನು ಫೇಸ್ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ.
ಸಿಡಿ ಪ್ರಕರಣ ಹೊರಬಂದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಳಿಕ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಅವರು ಇಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಏಳಿಗೆ ಸಹಿಸಿದವರಿಂದ ನಡೆದ ರಾಜಕೀಯ ಷಡ್ಯಂತ್ರ ಇದಾಗಿದೆ, ವೀಡಿಯೋ ರಿಲೀಸ್ ಮುನ್ನವೇ ಅಂದ್ರೆ 26 ಗಂಟೆ ಮೊದಲೇ ಈ ಬಗ್ಗೆ ಹೈಕಮಾಂಡ್ ನಿಂದ ಮಾಹಿತಿ ತಿಳಿದಿತ್ತು. ಬೆಳಗ್ಗೆ ಸಿಎಂ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಿದ್ದೇನೆ. ನಂತರ ವಚನಾನಂದ ಸ್ವಾಮೀಜಿಗಳ ಜೊತೆ ಒಂದು ಗಂಟೆ ಸಭೆ ನಡೆಸಿದ್ದೇನೆ. ಸಂಜೆ ಆರೂವರೆಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿದ್ದಾಗ ವೀಡಿಯೋ ರಿಲೀಸ್ ಆಗಿರುವ ವಿಷಯ ತಿಳಿಯಿತು ಎಂದು ಹೇಳಿದರು.
2+3+4 ಜನರ ಷಡ್ಯಂತ್ರ ಇದರಲ್ಲಿ ಅಡಗಿದೆ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ಯಶವಂತಪುರದ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ನಡೆದ ಷಡ್ಯಂತ್ರ ಇದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಡಿ ಹಿಂದೆ ಇಬ್ಬರು ನಾಯಕರಿದ್ದಾರೆ. ಸಮಯ ಬಂದಾಗ ಅವರಿಬ್ಬರ ಹೆಸರನ್ನ ಬಹಿರಂಗಗೊಳಿಸುತ್ತದೆ. ನಾನು ನಿರಪರಾದಿ. ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ. ಯಾರ ಒತ್ತಡದ ಮೇರೆಗೂ ನಾನು ರಾಜಿನಾಮೆ ಕೊಟ್ಟಿಲ್ಲ, ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ರಾಜಿನಾಮೆ ನೀಡಿದ್ದೇನೆ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯವಾಗಿದೆ, ನಾನು ನಿರಪರಾಧಿ ಎಂದು ಕಣ್ಣೀರು ಹಾಕಿದ್ದಾರೆ.










