ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗಲ್ಲ : ದೇವೇಗೌಡರ ಮುಂದೆ ಕಣ್ಣೀರಿಟ್ಟ ಜಿಟಿಡಿ.

75
firstsuddi

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಇದೀಗ ಜಿ.ಟಿ.ದೇವೇಗೌಡರ ಮನವೊಲಿಸಲು ಖುದ್ದು ಹೆಚ್.ಡಿ.ದೇವೇಗೌಡರೇ ಬಂದಿದ್ದರು.

ನಗರದ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸಕ್ಕೆ ಇಂದು ಹೆಚ್.ಡಿ.ದೇವೇಗೌಡರು ಭೇಟಿ ನೀಡಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಈ ವೇಳೆ ದೇವೇಗೌಡರ ಜೊತೆ ಇದ್ದರು. ಹೆಚ್.ಡಿ.ದೇವೇಗೌಡರು ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಹಾಗೂ ಪುತ್ರ ಹರೀಶ್ ಗೌಡ ಜೊತೆ ಮಾತುಕತೆ ನಡೆಸಿ ಮನವೊಲಿಸವಲ್ಲಿ ಯಶಸ್ವಿಯಾದರು. ದೇವೇಗೌಡರ ಭೇಟಿ ಶಾಸಕ ಜಿ.ಟಿ.ದೇವೇಗೌಡರನ್ನ ಭಾವುಕರಾನ್ನಾಗಿಸಿತ್ತು.

ಹೆಚ್ ಡಿಡಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗಲ್ಲ. ದಯವಿಟ್ಟು ನನ್ನ ಕ್ಷಮಿಸಿ. ಕಾಂಗ್ರೆಸ್ ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದು ಹೇಳಿದ್ದಾರೆ. ಆದರೆ ನಾವು ಜೆಡಿಎಸ್ ಪಕ್ಷದಿಂದ ಬೆಳೆದಿದ್ದೇವೆ. ಜೆಡಿಎಸ್ ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ. ಜೆಡಿಎಸ್ ನಲ್ಲೇ ಉಳಿಯುತ್ತೇನೆ. ಈ ಪಕ್ಷಕ್ಕೆ ಯಾವುದೇ ಕಳಂಕ ತರದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದರು. ಈ ಮೂಲಕ ಜಿ.ಟಿ.ದೇವೇಗೌಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಗೆ ಹೋಗ್ತಾರಾ ಅಥವಾ ಬಿಜೆಪಿಗೆ ಹೋಗ್ತಾರಾ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮುಂದೆ ಮೈಸೂರು ಜಿಲ್ಲೆಯ ಜೆಡಿಎಸ್ ನಾಯಕತ್ವವನ್ನ ಜಿ.ಟಿ.ದೇವೇಗೌಡರೇ ವಹಿಸಲಿದ್ದಾರೆ ಎಂದು ಘೋಷಿಸಿದರು. ಅಷ್ಟೇ ಅಲ್ಲ ಮುಂದಿನ ಮೈಸೂರು ಜಿಲ್ಲೆಯ ರಾಜಕೀಯ ತೀರ್ಮಾನಗಳನ್ನ ಜಿಟಿಡಿ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.