ನಾನು ರೈತರ ವಿರೋಧಿ ಅಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಶಿವಾನಂದ್ ಪಾಟೀಲ್.

46
firstsuddi

ಬೆಂಗಳೂರು: ನಾನು ರೈತ ವಿರೋಧಿಯಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ ಎಂಬ ತಮ್ಮ ಹೇಳಿಕೆ ಕುರಿತು ಸಚಿವ ಶಿವಾನಂದ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಹೇಳುವ ಮೂಲಕ ಸಚಿವರು ಪರೋಕ್ಷವಾಗಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ನಾನು ರೈತರ ವಿರೋಧಿ ಅಲ್ಲ, ರೈತರ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೂರು ವರ್ಷಕ್ಕೊಮೆ ರೈತರ ಬೆಳೆಗಳಿಗೆ ಬೆಲೆ ಬರುತ್ತದೆ. ಉಳಿದ ಎರಡು ಬೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹಾಗಾಗಿ ರೈತರು ಸಾಲಮನ್ನಾ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ ಎಂದಿದ್ದೇನೆ ಅಂದರು.

ಇತ್ತೀಚೆಗೆ ಕೇಂದ್ರದ ಯೋಜನೆಗಳು ರೈತರಿಗೆ ಮುಳುವಾಗಿವೆ. ನನಗೆ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಇದೆಲ್ಲ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಅಲ್ಲದೆ ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲಿ. ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಿ ಎಂದು ಇದೇ ವೇಳೆ ಶಿವಾನಂದ್ ಪಾಟೀಲ್ ಒತ್ತಾಯಿಸಿದರು.

ಸಚಿವರು ಹೇಳಿದ್ದೇನು..?: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಒಂದು ಆಸೆ ಇದೆ, ಮೇಲೆ ಮೇಲೆ ಬರಗಾಲ ಬರಲಿ ಎಂಬುದು. ಕಾರಣ ಸಾಲ ಮನ್ನಾ ಆಗುತ್ತೆ ಎಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು, ಸಚಿವರ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.