ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಭಾರತ್ ತೋಡೋ(ಭಾರತವನ್ನು ವಿಭಜಿಸಿ) ಎಂದು ಲೇವಡಿ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಇದೇ ವಿಚಾರ ಇಂದು ಸಂಸತ್ತಿನಲ್ಲಿ ಭಾರೀ ಗದ್ದಲ ಎಬ್ಬಿಸಿದೆ. ಆಡಳಿತಾರೂಡ ಬಿಜೆಪಿ ಸಂಸತ್ ಅಧಿವೇಶನ ಆರಂಭವಾದ ಕೂಡಲೇ ಖರ್ಗೆಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
ರಾಜಸ್ಥಾನದ ಅಲ್ವಾರ್ ನಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ತಮ್ಮ ಪಕ್ಷದ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಾಣವನ್ನು ಕಳೆದುಕೊಂಡರು. ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯಾ?, ಆದರೂ ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂದುಕೊಳ್ಳುತ್ತಾರೆ. ನಾವು ಏನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಅಂತಾರೆ ಎಂದಿದ್ದರು ಖರ್ಗೆ. ಈ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಖರ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಆಕ್ಷೇಪಾರ್ಹ ಭಾಷೆ ಬಳಸುವ ಮೂಲಕ ಸುಳ್ಳು ಹರಡಲು ಪ್ರಯತ್ನಿಸಿದ್ದಾರೆ. ಅಲ್ವಾರ್ ನಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಆಗ್ರಹಿಸಿದರು.
ಖರ್ಗೆ ಕ್ಷಮೆಗೆ ಒತ್ತಾಯ ಜಾಸ್ತಿಯಾಗಿ ಸದನದಲ್ಲಿ ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ಖರ್ಗೆಯವರು ಸಂಸತ್ ನ ಹೊರಗಡೆ ಈ ಹೇಳಿಕೆ ನೀಡಿದ್ದಾರೆ. ದೇಶದ 135 ಕೋಟಿ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಯಾರೋ ಹೊರಗಡೆ ಏನಾದರೂ ಹೇಳಿರುತ್ತಾರೆ. ನೀವೇನೂ ಮಕ್ಕಳಲ್ಲ ಎಂದಿದ್ದಾರೆ.
ಈ ವೇಳೆ ಬಿಜೆಪಿ ಆಗ್ರಹವನ್ನು ಖರ್ಗೆಯವರು ವ್ಯಂಗ್ಯವಾಡಿದರು. ನಾನು ಇಲ್ಲಿ ಆ ಹೇಳಿಕೆಯನ್ನು ಪುನರಾವರ್ತಿಸಿದರೆ, ಅವರಿಗೆ (ಬಿಜೆಪಿ) ತುಂಬಾ ಕಷ್ಟವಾಗುತ್ತದೆ, ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ಷಮೆಯಾಚಿಸಿದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ. ಕಾಂಗ್ರೆಸ್ ‘ಭಾರತ ತೋಡೊ (ವಿಭಜಿತ ಭಾರತ) ಯಾತ್ರೆ’ ನಡೆಸುತ್ತಿದೆ. ಯಾತ್ರೆ ವೇಳೆ ನಾನು ಹೇಳಿಕೆ ನೀಡಿದ್ದೆ. ಕಾಂಗ್ರೆಸ್ ಯಾವಾಗಲೂ ಭಾರತ್ ಜೋಡೋ (ಭಾರತವನ್ನು ಒಂದುಗೂಡಿಸುವ) ಮೇಲೆ ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾಗ ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದು ತಿಳಿಸಿದರು.










