ಮಂಗಳೂರು : ನಗರದ ಮಾರ್ಗನ್ಸ್ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗೇಶ್ ಎಂಬ ವ್ಯಕ್ತಿ ತನ್ನಿಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಹತ್ಯೆ ಮಾಡಿ ನೇಣು ಬಿಗಿದು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಮಂಗಳೂರು ಪೊಲೀಸರು ತನಿಖೆ ನಡೆಸಿದ್ದು, ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ನೂರ್ ಜಹಾನ್ ಎಂಬಾಕೆ ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಗಂಡನಿಂದ ದೂರವಿದ್ದಾಳೆ. ಈಕೆಯ ಅಪಾರ್ಟ್ಮೆಂಟ್ ಇರುವಲ್ಲಿ ನಾಗೇಶ್ ಕುಟುಂಬ ಕೆಲ ಸಮಯದ ಹಿಂದೆ ವಾಸವಾಗಿತ್ತು. ಅಲ್ಲಿಂದ ಬಂದ ಬಳಿಕವೂ ನಾಗೇಶ್ ಪತ್ನಿ ವಿಜಯಲಕ್ಷ್ಮಿ ನೂರ್ ಜಹಾನ್ ಜೊತೆಗೆ ಸಂಪರ್ಕದಲ್ಲಿದ್ದಳು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮತ್ತು ನಾಗೇಶ್ ಮಧ್ಯೆ ವೈಮನಸ್ಸು ಮೂಡಿದ್ದು ವಿಜಯಲಕ್ಷ್ಮಿ ಮನೆ ಬಿಟ್ಟು ನೂರ್ ಜಹಾನ್ ಮನೆಯಲ್ಲಿ ವಾಸವಿದ್ದಳು.
ಆ ವೇಳೆ ನೂರ್ ಜಹಾನ್, ವಿಜಯಲಕ್ಷ್ಮಿ ಬಳಿ ಪತಿಗೆ ಡೈವೋರ್ಸ್ ನೀಡುವಂತೆ ಸೂಚಿಸಿದ್ದಳಂತೆ. ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸುವುದಾಗಿ ತಿಳಿಸಿದ್ದಾಳೆ. ಬಳಿಕ ಈಕೆಗೆ ಡೈವೋರ್ಸ್ ನೀಡಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಳು. ಈ ವಿಚಾರ ತಿಳಿದ ನಾಗೇಶ್ ವಿಜಯಲಕ್ಷ್ಮಿ ಜೊತೆಗೆ ಗಲಾಟೆ ಮಾಡಿದ್ದಾನೆ. ಈ ವೇಳೆ ಮಕ್ಕಳು ಮತ್ತು ಪತ್ನಿಯನ್ನು ಕೊಂದು ನಾಗೇಶ್ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ನೂರ್ ಜಹಾನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.










