ಬೆಂಗಳೂರು : ನಾಳೆ ಬೆಳಿಗ್ಗೆ 8ಗಂಟೆ 4ನಿಮಿಷಕ್ಕೆ ಕಂಕಣ ಸೂರ್ಯಗ್ರಹಣ ಆರಂಭವಾಗಲಿದ್ದು, 11:00 ಗಂಟೆಗೆ ಮುಕ್ತಾಯವಾಗಲಿದೆ. ಕಂಕಣ ಸೂರ್ಯಗ್ರಹಣದ ವಿಶೇಷ ವಿದ್ಯಮಾನವನ್ನು ಹಲವು ಕೇಂದ್ರಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಶಾಲೆಗಳಲ್ಲಿ ವೀಕ್ಷಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಮಂಗಳೂರು, ಉಡುಪಿ ಮತ್ತು ಕೊಡಗುಗಳಲ್ಲಿ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದ್ದು, ಉಳಿದ ಕಡೆಗಳಲ್ಲಿ ಭಾಗಶಃ ಎಂದು ವಿಜ್ಞಾನಿಗಳು ಹೇಳುತ್ತಾರೆ. ಜ್ಯೋತಿಷಿಗಳ ಪ್ರಕಾರ ಅತ್ಯಂತ ಅಪಾಯಕಾರಿ ಕೇತುಗ್ರಸ್ಥ ಸೂರ್ಯ ಗ್ರಹಣ ಇದಾಗಿದ್ದು, ದ್ವಾದಶ ರಾಶಿಗಳ ಮೇಲೆ ಸೂರ್ಯ ಗ್ರಹಣದ ಪರಿಣಾಮ ಬೀಳಲಿದೆ. ಅಲ್ಲದೇ ನಾಳೆ ಬೆಳಿಗ್ಗೆ ರಾಜ್ಯದ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗುತ್ತದೆ.
ಗ್ರಹಣ ದೋಷವಿರುವ ರಾಶಿಗಳು ಯಾವುದು?
ಧನಸ್ಸು, ಮಕರ, ವೃಶ್ಚಿಕ, ವೃಷಭ, ಕರ್ಕಟಕ. ಈ 5 ರಾಶಿಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.
ಗ್ರಹಣ ದೋಷವಿರುವ ನಕ್ಷತ್ರಗಳು ಯಾವುದು?
ಮೂಲ, ಮಖ, ಅಶ್ವಿನಿ, ಜೇಷ್ಠ, ಪೂರ್ವಾಷಾಢ ಈ ಐದು ನಕ್ಷತ್ರಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.
ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?
*ಸೂರ್ಯಗ್ರಹಣ ಗೋಚರಿಸುವ ವೇಳೆ ನಿದ್ದೆ, ಊಟ, ಸ್ನಾನ, ಪ್ರಯಾಣ ಮಾಡಬಾರದು.
* ಬರೀಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಬಾರದು.
* ದೇವತಾ ವಿಗ್ರಹಗಳನ್ನು ಮುಟ್ಟಬಾರದು.
* ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು, ಯಾಕೆಂದರೆ ಸೂರ್ಯನ ಕಿರಣ ಗರ್ಭಿಣಿಯರ ಮೇಲೆ ಬೀಳುವುದರಿಂದ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
ಗ್ರಹಣದ ನಂತರ ಏನು ಮಾಡಬೇಕು?
ಗ್ರಹಣ ಮೋಕ್ಷದ ನಂತರ ಹರಿಯುವ ನೀರಿನಲ್ಲಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು. ಸ್ನಾನದ ನಂತರ ಆಹಾರ ಸೇವನೆ ಮಾಡಬಹುದು. ಈ ವೇಳೆ ಜಪ-ತಪ, ಧ್ಯಾನ, ಮಂತ್ರೋಪದೇಶ, ಪಿತೃದರ್ಪಣ ಮಾಡುವುದು ಒಳಿತು.
ಸೂರ್ಯಗ್ರಹಣ ವೀಕ್ಷಣೆಗೆ ಬಳಸಬೇಕಾದ ಉಪಕರಣಗಳು:
ಪಿನ್ಹೋುಲ್ ಉಪಕರಣ (ಬಿಳಿ ಗೋಡೆ ಅಥವಾ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ), ದೂರದರ್ಶಕ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಬೈನಾಕ್ಯುಲರ್ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಸೌರ ಫಿಲ್ಟರ್ ಇಲ್ಲದಿದ್ದಲ್ಲಿ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ, ಸೋಲಾರ್ ಪ್ರೊಜೆಕ್ಷನ್ ಸಿಸ್ಟಮ್, ಸೌರ ಕನ್ನಡಕ (ಸೋಲಾರ್ ಫಿಲ್ಟರ್) (ರಂಧ್ರವಿಲ್ಲದ ಮತ್ತು ವೈಜ್ಞಾನಿಕವಾಗಿ ಸುರಕ್ಷಿತವೆಂದು ಪರೀಕ್ಷಿಸಲ್ಪಟ್ಟ)
ಮುಂಜಾಗ್ರತೆಗಳು: ಸೋಲಾರ್ ಫಿಲ್ಟರ್ (ಸೌರ ಕನ್ನಡಕ) ಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಿ. ಸೂರ್ಯನನ್ನು ನೇರವಾಗಿ (ಗ್ರಹಣಕಾಲದಲ್ಲೂ ಸಹ) ಬರಿಗಣ್ಣಿನಿಂದ ವೀಕ್ಷಿಸಬೇಡಿ. ಫಿಲ್ಟರ್ಗಳನ್ನು ಬಳಸುವಾಗ ಕೂಡ ಮಾರ್ಗದರ್ಶಕರ ಸೂಚನೆಗಳನ್ನು ಪಾಲಿಸಿ. ಹಳೆಯ ಅಥವಾ ಹಾಳಾಗಿರುವ ಸೋಲಾರ್ ಫಿಲ್ಟರ್ಗಳನ್ನು ಬಳಸಬೇಡಿ. ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರ, ಸದಸ್ಯ ಕಾರ್ಯದರ್ಶಿ ಇವರ ಪ್ರಕಟಣೆ ತಿಳಿಸಿದೆ.










