ನಾಳೆಯಿಂದ ನಾಲ್ಕು ದಿನ ಮಲೆಮಹದೇಶ್ವರ ಮಹಾಕುಂಭ ಮೇಳ…

54
firstsuddi

ಮೈಸೂರು : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ 4 ದಿನ ಅಂದರೆ ಅಕ್ಟೋಬರ್ 13ರಿಂದ 16ರ ವರೆಗೆ ಮಲೆಮಹದೇಶ್ವರ ಮಹಾ ಕುಂಭಮೇಳ ನಡೆಯಲಿದೆ.

ಈ ಕುರಿತು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾಹಿತಿ ನೀಡಿದರು. ಅ.13 ರಿಂದ 16 ರವರೆಗೆ ಕೆ.ಆರ್. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆಯೋಜಿಸಲಾಗಿದೆ. 2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳ ಯಶಸ್ವಿಯಾಗಿತ್ತು. ಈಗ ಒಂಬತ್ತು ವರ್ಷಗಳ ನಂತರ ಮತ್ತೆ ಕುಂಭಮೇಳ ನಡೆಯಲಿದೆ. ನಾಳೆಯಿಂದ ವಿಶೇಷ ಪೂಜೆ ಇರಲಿವೆ. ತ್ರಿನೇತ್ರ ಸ್ವಾಮಿ ಸಾನಿಧ್ಯದಲ್ಲಿ ವಿಧಿವಿಧಾನಗಳು ಜರುಗಲಿವೆ. ಮಹದೇಶ್ವರ ಮೂರ್ತಿ ಸ್ಥಾಪನೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಗಳು ತಿಳಿಸಿದರು.

ಅಕ್ಟೋಬರ್ 15ರಂದು ಮಹಾ ಕುಂಭಮೇಳದ ಧಾರ್ಮಿಕ ಸಭೆ ನಡೆಯಲಿದ್ದು, ಸಂಜೆ ವಾರಾಣಸಿಯ ಕಾಶಿ ಮಾದರಿ ಗಂಗಾ ಆರತಿ ನಡೆಯಲಿದೆ. ಅಕ್ಟೋಬರ್ 16ರಂದು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಜರುಗಲಿದ್ದು ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.