ನಿರ್ಭಯಾ ಪ್ರಕರಣ-ಸುಪ್ರೀಂ ನಿಂದ ಆರೋಪಿ ಪವನ್ ಗುಪ್ತಾ ಸಲ್ಲಿಸಿದ ಕ್ಯುರೇಟಿವ್ ಅರ್ಜಿ ವಜಾ…

161
firstsuddi

ನವದೆಹಲಿ : 2012ರ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಪವನ್ ಗುಪ್ತಾ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆರೋಪಿ ಪವನ್ ಗುಪ್ತಾ ಕಳೆದ ಶುಕ್ರವಾರ ತನಗೆ ನೀಡಿರುವ ಮರದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದು, ಕಾನೂನು ಹೋರಾಟದ ಎಲ್ಲಾ ಅವಕಾಶಗಳು ಕೈತಪ್ಪಿಹೋಗಿವೆ. ಅಲ್ಲದೇ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಆರೋಪಿ ಪವನ್ ಗುಪ್ತಾಗೆ ಕೊನೆಯ ಅವಕಾಶವಿದ್ದು, ಉಳಿದ ಮೂವರು ಆರೋಪಿಗಳ ಎಲ್ಲಾ ಅರ್ಜಿಗಳು ತಿರಸ್ಕೃತವಾಗಿದೆ. ಈ ಹಿಂದೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಿಗೆ ಮಾ.3ರಂದು ಗಲ್ಲುಶಿಕ್ಷೆ ವಿಧಿಸುವಂತೆ ಡೆತ್ ವಾರೆಂಟ್ ಜಾರಿ ಮಾಡಿತ್ತು. ಆದರೆ ಆರೋಪಿಗಳು ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಗಲ್ಲುಶಿಕ್ಷೆ ವಿಳಂಬವಾಗುತ್ತಲೇ ಇರುವುದರಿಂದ ಸಂತ್ರಸ್ಥೆಯ ತಾಯಿ ಆಶಾದೇವಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.