ನವದೆಹಲಿ : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದಾರೆ. ಅತ್ಯಾಚಾರ ಪ್ರಕರಣ ನಾಲ್ವರು ಆರೋಪಿಗಳಿಗೆ ಇಂದು ಬೆಳಿಗ್ಗೆ 6ಗಂಟೆಗೆ ಗಲ್ಲಿಗೇರಿಸಲು ಸಮಯ ನಿಗದಿಯಾಗಿತ್ತು. ಆದರೆ ಆರೋಪಿ ವಿನಯ್ ಶರ್ಮಾ ಸಲ್ಲಿಸಿದ ಕ್ಷಮಾದಾನ ಅರ್ಜಿ ಕುರಿತು ತೀರ್ಮಾನ ಪ್ರಕಟವಾಗದ ಹಿನ್ನೆಲೆ, ನಿನ್ನೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರಿಂದ ಗಲ್ಲು ಶಿಕ್ಷೆ ವಿಳಂಬವಾಗಿದ್ದು, ಪ್ರಕರಣದ ಆರೋಪಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ರೀತಿಯ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಅಲ್ಲದೇ ಪ್ರಕರಣದ ಮತ್ತೋರ್ವ ಆರೋಪಿ ಪವನ್ ಗುಪ್ತ ಅತ್ಯಾಚಾರ ನಡೆದ ವೇಳೆ ನಾನು ಅಪ್ರಾಪ್ತನಾಗಿದ್ದೆ ಹೀಗಾಗಿ ನನ್ನನ್ನು ಗಲ್ಲುಶಿಕ್ಷೆಗೆ ಒಳಪಡಿಸಬಾರದು ಎಂದು ಮತ್ತೊಮ್ಮೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ಪವನ್ ಗುಪ್ತಾ ಅಪ್ರಾಪ್ತನಾಗಿದ್ದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.










