ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಲೇಡಿ…

43
firstsuddi

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್​ಬಿಐ ಹೆಸರನ್ನು ಬಳಸಿಕೊಂಡು, ಬೇಕಾದಷ್ಟು ಸಾಲ ನೀಡುವುದಾಗಿ ಹಾಗೂ ಅರ್ಧದಷ್ಟು ಸಬ್ಸಿಡಿ ನೀಡುವುದಾಗಿ ಹೇಳಿ ಅಮಾಯಕರಿಂದ ಕೋಟಿ ರೂ. ಹಣ ಪಡೆದು ಮಹಿಳೆಯೊಬ್ಬಳು ವಂಚಿಸಿರುವ ಪ್ರಕರಣ ನಗರದ ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

ಟ್ರಸ್​​ಗೆ ಆರ್​ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಮೊದಲು ಈಕೆ ಜನರಿಗೆ ನಂಬಿಸಿದ್ದಾಳೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ತೋರಿಸಿದ್ದಾಳೆ. ಕಂತೆ ಕಂತೆ ಹಣದ ನೋಟುಗಳ ವೀಡಿಯೋಗಳನ್ನು ಕಳುಹಿಸಿ ಜನರನ್ನು ನಂಬಿಸಿದ್ದಳು. ಸುಲಭವಾಗಿ ಸಾಲ ಕೊಡುತ್ತೇನೆ. ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ಹೇಳಿದ್ದಾಳೆ. ಆದರೆ ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕು ಎಂದು ಕಥೆ ಕಟ್ಟಿದ್ದಳು. ಇದನ್ನು ನಂಬಿದ ಜನರು ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ.

ಆದರೆ, ಕೆಲವು ತಿಂಗಳಾದರೂ ಲೋನ್ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ಈಕೆ ವಂಚನೆ ಮಾಡಿದ್ದು, ನೂರಾರು ಮಂದಿಗೆ ಪಂಗನಾಮ ಹಾಕಿದ್ದಾಳೆ.

ಪ್ರಕರಣ ಸಂಬಂಧ ಸೂರ್ಯನಗರದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪವಿತ್ರ ಹಾಗೂ ಆಕೆಯ ಸಹಚರರಾದ ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.