ತಿರುವನಂತಪುರಂ: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ವೇಳೆ ವಿದ್ಯಾರ್ಥಿನಿಯರಿಗೆ ಒಳಉಡುಪು ತೆಗೆಯಲು ಸೂಚಿಸಿದ್ದ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಆ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಮರು ಪರೀಕ್ಷೆಗೆ ಅವಕಾಶ ನೀಡಿದೆ.
ಸೆಪ್ಟೆಂಬರ್ 4ರಂದು ನೀಟ್ ಅಭ್ಯರ್ಥಿಗಳಿಗೆ ಪುನಃ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಮರು ಪರೀಕ್ಷೆ ನಡೆಸುವ ಬಗ್ಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಎನ್ ಟಿಎ ತಿಳಿಸಿದೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಮುನ್ನ ತಮ್ಮ ಒಳಉಡುಪುಗಳನ್ನು ತೆಗೆದಿಡುವಂತೆ ಹೇಳಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರು ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಚಾತಮಂಗಲಂನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಬ್ರಾಗಳನ್ನು ತೆಗೆಯುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದರು.
ನಂತರ ಈ ಕುರಿತಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಂಗಸಿನ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಆಪರಾಧಿಕ ಬಲಪ್ರಯೋಗ ಮಾಡುವುದು) ಮತ್ತು 509 (ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶವಿರುವ ಶಬ್ದ, ಸಂಜ್ಞೆ ಅಥವಾ ಕೃತ್ಯ) ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಸದ್ಯ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.










