ನೀಟ್ ಪರೀಕ್ಷೆ ವೇಳೆ ಒಳಉಡುಪು ತೆಗೆಯುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯ – ಪ್ರಕರಣ ದಾಖಲು…

72
firstsuddi

ತಿರುವನಂತಪುರ : ನೀಟ್ ಪರೀಕ್ಷೆಗೆ ಹಾಜರಾಗುವ ಮುನ್ನ ನಡೆದ ತಪಾಸಣೆಯ ವೇಳೆ ಒಳ ಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ಈ ಸಂಬಂಧ ಇದೀಗ ಕೊಲ್ಲಂ ಪೊಲೀಸರು ತಪ್ಪಿತಸ್ಥರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಆಯುರ್ ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನೀಟ್ ಪರೀಕ್ಷೆಗೆ ಹಾಜರಾಗುವ ಮುನ್ನ ನಡೆದ ತಪಾಸಣೆಯ ವೇಳೆ ಒಳ ಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪರೀಕ್ಷಾ ಕೇಂದ್ರ ಒಳ ಪ್ರವೇಶಿಸುವ ಮುನ್ನ ನಡೆದ ತಪಾಸಣೆಯಲ್ಲಿ ಮಹಿಳಾ ಸಿಬ್ಬಂದಿ ಒಳಉಡುಪನ್ನು ತೆಗೆದಿಡಲು ಸೂಚಿಸಿದರು. ಇಲ್ಲವಾದಲ್ಲಿ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ದೂರು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯರ ಮೇಲೆ ಉದ್ದೇಶಪೂರ್ವಕ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 509 (ಮಾನಹಾನಿ) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ನನ್ನ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಪರೀಕ್ಷೆ ಬರೆಯಲು ಮಹಿಳಾ ಆಕಾಂಕ್ಷಿಗಳಿಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು 17 ವರ್ಷದ ಯುವತಿಯ ತಂದೆ ನಿನ್ನೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಮಾನವ ಹಕ್ಕುಗಳ ಆಯೋಗವು ಕೊಲ್ಲಂ ಗ್ರಾಮಾಂತರ ಎಸ್ಪಿಗೆ ಈ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.