ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು…

636
firstsuddi

ಕೋಲಾರ : ಶಾಲಾ ವಾರ್ಷಿಕೋತ್ಸವಕ್ಕೆಂದು ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಿತ(15) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದ್ದು, ಪೂಜಿತಾ ಟಿ.ಗೊಲ್ಲಹಳ್ಳಿ ಬಳಿ ಇರುವ ವಿಮಲ ಹೃದಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದಿರುವ ದೃಶ್ಯ ಶಾಲೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶನಿವಾರ ಶಾಲಾ ವಾರ್ಷಿಕೋತ್ಸವ ಇದ್ದ ಹಿನ್ನೆಲೆ ನಿನ್ನೆ ಪೂಜಿತಾ ತನ್ನ ಸಹಪಾಠಿಗಳೊಂದಿಗೆ ನೃತ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದು, ಕೂಡಲೇ ವಿದ್ಯಾರ್ಥಿನಿಯನ್ನು ಬೇತಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಕುಸಿದು ಬಿದ್ದ ವೇಳೆ ಶಿಕ್ಷಕನೋರ್ವ ಅಲ್ಲೇ ಇದ್ದರೂ ಏನಾಗಿದೆ ಎಂದು ನೋಡದೆ ಬಳಿಕ ಎರಡು ಜೇಬಿನಲ್ಲೂ ಕೈ ಹಾಕಿಕೊಂಡು ನಿಂತು ನೋಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿನಿ ಕುಸಿದು ಬಿದ್ದರೂ ಆಸ್ಪತ್ರೆಗೆ ದಾಖಲಿಸದೆ ಶಾಲಾ ಸಿಬ್ಬಂದಿ ನಿರ್ಲಕ್ಷ ವಹಿಸಿದ್ದಾರೆ ಎನ್ನಲಾಗಿದೆ.