ಬೆಳಗಾವಿ : ಬಿಜೆಪಿ ನಾಯಕರು ನೆರೆ ಸಂತ್ರಸ್ಥರ ಸಮಸ್ಯೆಯನ್ನು ಮರೆಮಾಚಲು ರಾಜ್ಯದಲ್ಲಿ ಟಿಪ್ಪು, ದೇಶದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ಥಾಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನೆರೆ ಸಮಸ್ಯೆಯಿಂದ ಬಳಲುತ್ತಿದ್ದರೂ ಬಿಜೆಪಿ ನಾಯಕರು ಅವರ ಬಗ್ಗೆ ಗಮನಹರಿಸುತ್ತಿಲ್ಲ. ಸಂತ್ರಸ್ಥರ ಸಮಸ್ಯೆಯನ್ನು ಮರೆಮಾಚಲು ರಾಜ್ಯದಲ್ಲಿ ಟಿಪ್ಪು, ದೇಶದಲ್ಲಿ ಕಾಶ್ಮೀರ ವಿಚಾರವನ್ನು ಎಳೆದು ತರುತ್ತಿದ್ದಾರೆ. ಈಗಾಗಲೇ ಸಂತ್ರಸ್ಥರು ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದಾರೆ. ನನಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಜಿಲ್ಲೆಗೆ ಬಂದು ಹೋಗಿದ್ದೇ ಗೊತ್ತಾಗಿಲ್ಲ. ಬಿಜೆಪಿ ನಾಯಕರು ಅಧಿಕಾರ ಹಿಡಿಯುವವರೆಗೂ ಒಂದು ಹೇಳುತ್ತಾರೆ. ಅಧಿಕಾರ ಬಂದ ಮೇಲೆ ಎಲ್ಲರನ್ನೂ ಮರೆಯುತ್ತಾರೆ. ಇದು ಬಿಜೆಪಿ ಪಕ್ಷದ ಸಿದ್ಧಾಂತ. ಈ ರೀತಿ ವಿಷಯವನ್ನು ಡೈವರ್ಟ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿ ನಾಯಕರಿಗೆ ಜನರ ಅಭಿವೃದ್ದಿ ಬೇಕಾಗಿಲ್ಲ. ಜನರ ದಿಕ್ಕನ್ನು ಬೇರೆಡೆಗೆ ಡೈವರ್ಟ್ ಮಾಡುತ್ತಾರೆ. ನೆರೆ ಸಂತ್ರಸ್ಥರಿಗೆ ಕೇಂದ್ರ ಸರ್ಕಾರ 1200 ಕೋಟಿ ರೂ ಪರಿಹಾರ ಬಿಡುಗಡೆ ಮಾಡಿರುವುದೇ ಅಂತಿಮ. ಇನ್ನು ಹೆಚ್ಚಿನ ಪರಿಹಾರ ಬಿಡುಗಡೆಯಾಗುವುದಿಲ್ಲ. ರಾಜ್ಯ ಬಿಜೆಪಿ ನಾಯಕರು ಕೇಂದ್ರದಲ್ಲಿ ಮನವಿ ಮಾಡಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.










