ಲಖನೌ(ಉತ್ತರಪ್ರದೇಶ) : ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಿನ್ನೆ ಪ್ರಯಾಗರಾಜ್ ನ ಬಘಂಬರಿ ಮಠದ ಕೊಠಡಿಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಪತ್ರ ಕೂಡ ಪತ್ತೆಯಾಗಿದೆ.
ಇಂದು ಮಹಾಂತ್ ನರೇಂದ್ರ ಗಿರಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾಂತ್ ಅವರ ಅಂತ್ಯ ಸಂಸ್ಕಾರದಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.
ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರ ನಿಧನ ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ರಾಮನಿಗೆ ಅವರ ಚೈತನ್ಯವನ್ನು ಅವರ ಪಾದದಲ್ಲಿ ನೀಡಲಿ ಮತ್ತು ಅವರ ನೋವನ್ನು ಭರಿಸುವ ಶಕ್ತಿಯನ್ನು ಅನುಯಾಯಿಗಳಿಗೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಟ್ವೀಟ್ ಮಾಡಿದ್ದಾರೆ.
ಇನ್ನು ಸೂಸೈಡ್ ನೋಟ್ ನಲ್ಲಿ ತನ್ನ ಆಪ್ತ ಶಿಷ್ಯನಾದ ಆನಂದ್ ಗಿರಿ ಎಂಬುವರು ಹೆಸರನ್ನು ಮಹಾಂತ ಗಿರಿ ಸ್ವಾಮಿ ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಆನಂದಗಿರಿಯವರನ್ನು ಪೊಲೀಸರು ಹರಿದ್ವಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ಆತ್ಮಹತ್ಯೆಗೆ ಕಾರಣ? : ಕಳೆದ ಕೆಲ ತಿಂಗಳಿಂದ ನರೇಂದ್ರ ಗಿರಿ ಹಾಗೂ ಅವರ ಶಿಷ್ಯ ಆನಂದ ಗಿರಿ ಅವರ ನಡುವೆ ಮನಸ್ತಾಪವಿತ್ತು. ದೇವಾಲಯದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂಬ ಕಾರಣಕ್ಕಾಗಿ ಆನಂದ ಗಿರಿ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು. ಇದಾದ ಬಳಿಕ ಅವರನ್ನ ಮಠದಿಂದ ಹೊರ ಹಾಕಲಾಗಿತ್ತು.
ಹೀಗಾಗಿ, ನರೇಂದ್ರ ಗಿರಿ ವಿರುದ್ಧ ಅವರು ಅನೇಕ ರೀತಿಯ ಹೇಳಿಕೆ ನೀಡಿ, ಗಂಭೀರ ಆರೋಪ ಮಾಡಿದ್ದರು. ಇದರಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.










