ನೇಹಾ ಕೊಲೆ ಪ್ರಕರಣ: ಸಿಐಡಿ ತನಿಖೆ ಆರಂಭ…

50
firstsuddi

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡಿದೆ. ನಿನ್ನೆ ಸಿಐಡಿ ವಿಭಾಗದ ಪೊಲೀಸರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಕಡತಗಳನ್ನು ಹಸ್ತಾಂತರಿಸಿದ್ದಾರೆ. ಸಿಐಡಿ ಎರಡು ತಂಡಗಳಲ್ಲಿ ತನಿಖೆ ಆರಂಭಿಸಿದ್ದು, ಒಂದು ತಂಡ ಹತ್ಯೆ ನಡೆದ ಸ್ಥಳ ಬಿವಿಬಿ ಕಾಲೇಜು ಆವರಣದಲ್ಲಿ ಪರಿಶೀಲನೆ ನಡೆಸಿದ್ರೆ, ಇನ್ನೊಂದು ತಂಡ ಆರೋಪಿಯ ಊರು ಮುನವಳ್ಳಿಗೆ ತೆರಳಿ ಮಾಹಿತಿ ಕಲೆ ಹಾಕಿದೆ.

ಸೋಮವಾರ ರಾತ್ರಿ ನಗರಕ್ಕೆ ಆಗಮಿಸಿದ್ದ ಎಸ್‌ಪಿ ವೆಂಕಟೇಶ್ ನೇತೃತ್ವದ ಸಿಐಡಿ ತಂಡ ನಿನ್ನೆ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು. ನಂತರ ವಿದ್ಯಾನಗರ ಠಾಣೆಗೆ ಹಾಗೂ ಪ್ರಕರಣದ ತನಿಖಾಧಿಕಾರಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಕಚೇರಿಗೆ ತೆರಳಿ ಈವರೆಗಿನ ತನಿಖಾ ವಿವರಗಳ ಮಾಹಿತಿ ಪಡೆದರು.

ಧಾರವಾಡ ಕೇಂದ್ರ ಕಾರಾಗೃಹದಿಂದ ನೇಹಾ ಹತ್ಯೆ ಆರೋಪಿ ಫಯಾಜ್​ನನ್ನು ಸಿಐಡಿ ತಂಡವು ವಶಕ್ಕೆ ಪಡೆಯಿತು. ಬಳಿಕ ಆರೋಪಿಯ ಆರೋಗ್ಯ ತಪಾಸಣೆಗೆ ಪೊಲೀಸ್ ಹೆಡ್‌ಕ್ವಾರ್ಟರ್ಸ್​ನಲ್ಲಿನ ಆಸ್ಪತ್ರೆಗೆ ಕರೆತರಲಾಗಿತ್ತು. ಜೈಲಿನಿಂದ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ತಪಾಸಣೆ ಮಾಡಿಸಲಾಯಿತು. ಬಳಿಕ ಹುಬ್ಬಳ್ಳಿಯತ್ತ ಫಯಾಜ್​ನನ್ನು ಭಾರಿ ಪೊಲೀಸ್ ಬಂದೋಬಸ್ತ್​​ನಲ್ಲಿ ಅಧಿಕಾರಿಗಳು ಕೊಂಡೊಯ್ದರು. ತದನಂತರ ಕೊಲೆ ನಡೆದ ಸ್ಥಳವಾದ ಹುಬ್ಬಳ್ಳಿ ಬಿವಿಬಿ ಕಾಲೇಜಿಗೆ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದರು.

ಸರ್ಕಾರದ ಆದೇಶದ ಮೇರೆಗೆ ಎಸ್‌ಪಿ ದರ್ಜೆಯ ವೆಂಕಟೇಶ್ ಹಾಗೂ ಡಿವೈಎಸ್‌ಪಿ ದರ್ಜೆಯ ಮನೋಹರ ಅವರೊಂದಿಗೆ ಎಂಟು ಜನರ ಸಿಐಡಿ ತಂಡ ನಗರದಲ್ಲಿಯೇ ವಾಸ್ತವ್ಯ ಹೂಡಿದೆ.

ಹುಬ್ಬಳ್ಳಿಯ ಬಿವಿಪಿ ಕಾಲೇಜು ಕ್ಯಾಂಪಸ್ ನಲ್ಲಿ ನೇಹಾ ಹಿರೇಮಠ ಅವರನ್ನು ಏಪ್ರಿಲ್ 18ರಂದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಕೂಡಲೇ ಪ್ರಕರಣದ ಮುಖ್ಯ ಆರೋಪಿ ಫಯಾಜ್ ನನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಬಂಧಿಸಿದ್ದರು.