ಹುಬ್ಬಳ್ಳಿ: ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಮುಖಂಡ ಇಜಾರಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಯಾಜ್‌ಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಾಳೆ ಹುಬ್ಬಳ್ಳಿ ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ ಅವರೆಲ್ಲಾ ಬಂದ್ ಬೆಂಬಲಿಸಿ ಎಂದು ಇಜಾರಿ ಹೇಳಿದ್ದು ನಾಳೆ ಬಂದ್ ಅಂಗವಾಗಿ ಬಿವಿಬಿ ಕಾಲೇಜಿನಿಂದ ಮೆರವಣಿಗೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಎಬಿವಿಪಿ ಕಾರ್ಯದರ್ಶಿ ಸಚಿನ್ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪೂರ್ವ ನಿಯೋಜಿತ ಕೃತ್ಯ. ಮೇಲ್ನೋಟಕ್ಕೆ ಇದೊಂದು ಲವ್ ಜಿಹಾದ್ ಪ್ರಕರಣ ಎನಿಸುತ್ತಿದೆ. ಕಾಲೇಜು ಕ್ಯಾಂಪಸ್‌ನೊಳಗೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಸಿಎಂ, ಗೃಹಮಂತ್ರಿ ಅದ್ಹೇಗೆ ಆಕಸ್ಮಿಕ ಘಟನೆ ಅಂತಾರೋ ಗೊತ್ತಿಲ್ಲ. ಅವರ ಹೇಳಿಕೆ ನಮಗೆ ಅಚ್ಚರಿ ಮೂಡಿಸಿದೆ ಎಂದರು.
ಅನುಕಂಪ ತೋರಿಸದೇ ಹಂತಕನನ್ನು ಎನ್ಕೌಂಟರ್ ಮಾಡಬೇಕು. ಕಾಲೇಜು ಕ್ಯಾಂಪಸ್‌ನಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಯಾಗಬೇಕು. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.










