ನವದೆಹಲಿ : ಜನರು ಸಿಕ್ಕ ಸಿಕ್ಕ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ಪಾರ್ಕಿಂಗ್ ಸಮಸ್ಯೆ ಉಂಟು ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ.
ಇಂಡಸ್ಟ್ರಿಯಲ್ ಡಿಕಾರ್ಬೋನೈಸೇಶನ್ ಸಮ್ಮಿಟ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸುವುದರೊಂದಿಗೆ, ಆ ವಾಹನದ ಫೋಟೋಗಳನ್ನು ತೆಗೆದು, ಅದನ್ನು ಶೇರ್ ಮಾಡಿದ್ದಲ್ಲಿ, ಅವರಿಗೆ 500 ರೂ. ಬಹುಮಾನ ಕೊಡುವ ಹೊಸ ಕಾನೂನನ್ನು ತರುವ ಬಗ್ಗೆ ಯೋಜಿಸಿರುವುದಾಗಿ ತಿಳಿಸಿದ್ದಾರೆ.
ಈ ರೀತಿಯ ನಿಯಮವನ್ನು ಜಾರಿ ಮಾಡಲು ಸರ್ಕಾರ ಕಾನೂನು ತರಲಿದೆ. ಆಗ ಮಾತ್ರ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಕೆಲವು ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಕಾರುಗಳನ್ನು ಹೊಂದಿರುವವರೂ ಇದ್ದಾರೆ. ಆದರೆ ಯಾರೂ ಪಾರ್ಕಿಂಗ್ ಗೆ ಜಾಗವನ್ನೇ ನಿರ್ಮಿಸುತ್ತಿಲ್ಲ. ಉದಾಹರಣೆ ಕೊಡುವುದಾದರೆ ದೆಹಲಿಯಲ್ಲಿ ಇರುವ ವಿಶಾಲವಾದ ರಸ್ತೆಗಳನ್ನೇ ಜನರು ಪಾರ್ಕಿಂಗ್ ಜಾಗವಾಗಿ ಪರಿಗಣಿಸುತ್ತಿದ್ದಾರೆ ಎಂದು ಗಡ್ಕರಿ ತಿಳಿಸಿದರು.










