ಪ.ಜಾತಿ, ಪ.ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಯಾವುದೇ ಯೋಜನೆಗಳಿಗೂ ಬಳಸದಂತೆ ಒತ್ತಾಯ…

68
firstsuddi

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಯಾವುದೇ ಯೋಜನೆಗಳಿಗೂ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಬಹುಜನ ಸಮಾಜ ಪಕ್ಷ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಪ.ಜಾತಿ, ಪ.ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದಲ್ಲಿ ಕಲಂ 7ಡಿ ಅಡಿ 11 ಸಾವಿರ ಕೋಟಿಯಷ್ಟು ಹಣವನ್ನು ಬೇರೆ ಬಾಬ್ತುಗಳಿಗೆ ಬಳಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಹೇಳಿಕೆಯಲ್ಲಿ ತೀವ್ರವಾಗಿ ಖಂಡಿಸಿರುವ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಇದು ದಲಿತರಿಗೆ ಮಾಡಿರುವ ವಂಚನೆಯಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ.ಜಾತಿ, ಪ.ವರ್ಗಗಳ ಅಭಿವೃದ್ಧಿಗೆ 34, 423 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಆದರೆ, ಈಗ ಆ ಹಣವನ್ನು ಡ್ಯಾಮ್ ನಿರ್ಮಾಣಕ್ಕೆ, ಮೆಟ್ರೋ ಕಾಮಗಾರಿಗೆ, ಉನ್ನತ ಶಿಕ್ಷಣ ಸೇರಿದಂತೆ ಇನ್ನಿತರ ಬಾಬ್ತುಗಳಿಗೆ ಬಳಸಿರುವುದು ಮತ್ತು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಮುಂದಾಗಿರುವುದರಿಂದ ಆ ಹಣವನ್ನು ದುರ್ಬಳಕೆ ಮಾಡಿದಂತಾಗಿದೆ ಎಂದು ಆರೋಪಿಸಿದ್ಧಾರೆ.

ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ 7ಡಿ ಕಲಂಅನ್ನು ರದ್ದು ಮಾಡುವುದಾಗಿ ಘೋಷಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ತಮ್ಮ ಬಜೆಟ್ ಭಾಷಣದಲ್ಲಿ ಕಲಂಅನ್ನು ರದ್ದು ಮಾಡುವುದಾಗಿ ಪ್ರಕಟಿಸಿದ್ದರು. ಈಗ ಅದರಿಂದ ಹಿಂದೆ ಸರಿಯುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ ಎಂದು ದೂರಿದ್ದಾರೆ.

ದಲಿತರ ಮೀಸಲು ಹಣ 11 ಸಾವಿರ ಕೋಟಿಯಲ್ಲಿ ಪ.ಜಾತಿ, ಪ. ವರ್ಗದವರಿಗೆ ಮನೆ ನಿರ್ಮಿಸಿಕೊಳ್ಳಲು ತಲಾ 5 ಲಕ್ಷರೂ. ಅನುದಾನ ನೀಡಿದ್ದರೆ. 2.20 ಲಕ್ಷ ಮನೆ ನಿರ್ಮಾಣವಾಗುತ್ತಿತ್ತು. ಇದರಿಂದ 11 ಲಕ್ಷ ದಲಿತರ ವಸತಿ ಸಮಸ್ಯೆ ಪರಿಹಾರವಾಗುತ್ತಿತ್ತು. ದಲಿತ ನಿರುದ್ಯೋಗಿಗಳಿಗೆ ಉದ್ದಿಮೆ ನಡೆಸಲು ತಲಾ 5 ಲಕ್ಷ ರೂ. ಬಂಡವಾಳ ನೀಡಿದ್ದರೆ. ಎರಡು ಲಕ್ಷ ಕುಟುಂಬಗಳು ಸ್ವಂತ ಕಾಲ ಮೇಲೆ ನಿಲ್ಲಲು ಅವಕಾಶವಾಗುತ್ತಿತ್ತು. ಆ ಹಣದಲ್ಲಿ ಪರಿಶಿಷ್ಟರಿಗೆ ಭೂಮಿ ಖರೀದಿಸಲು ಸಹಾಯ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರವೂ ಸಹ ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈಗ ಕಾಂಗ್ರೆಸ್ ಸರ್ಕಾರವೂ ಅದನ್ನೇ ಮಾಡಲು ಹೊರಟಿರುವುದು ದಲಿತರಿಗೆ ಮಾಡುವ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ 7ಡಿ ಕಲಂಅನ್ನು ರದ್ದು ಪಡಿಸಬೇಕು. ದಲಿತ ವರ್ಗಕ್ಕೆ ಮೀಸಲಿಟ್ಟಿರುವ ಹಣವನ್ನು ಪ.ಜಾತಿ, ಪ.ವರ್ಗಗಳ ಕುಟುಂಬಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಬಳಸಬೇಕು ಎಂದು ಆಗ್ರಹಿಸಿದ್ದಾರೆ.