ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದು, “ಕೆಲವರು ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು. ಪಕ್ಕದ ಮನೆಯ ಒಲೆ ಆರಿಸಲು ಬರುವ ಮುನ್ನ ಹೊತ್ತಿ ಉರಿಯುತ್ತಿರುವ ತಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ “ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ನಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯ? ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಲೂಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆ” ಎಂದು ಟ್ವೀಟ್ ಮಾಡಿದ್ದರು.











