ಪಡಿತರ ಅಕ್ಕಿ ಕಳ್ಳತನ ಪ್ರಕರಣ: ದೂರು ಕೊಟ್ಟು ತಾನೇ ಸಿಕ್ಕಿಬಿದ್ದ ಅಧಿಕಾರಿ…

64
firstsuddi

ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಅಧಿಕಾರಿಯೇ ಇದೀಗ ಆರೋಪಿಯಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯ ಬಹಿರಂಗವಾಗಿದೆ.

ನವೆಂಬರ್ 22 ರಂದು ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ದೂರನ್ನೂ ನೀಡಿದ್ದ. ಆದರೆ ಇದೀಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದ್ದು, ದೂರು ನೀಡಿದ್ದ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ಹಾಗೂ ಹಿಂದಿನ ಉಪ ನಿರ್ದೇಶಕ ಪ್ರಭು ದೋರೆ ಅವರೇ ಬಂಧನದ ಭೀತಿ ಎದುರಿಸುತ್ತಿರುವವರು.

ಈ ಅಧಿಕಾರಿಗಳು ಅಕ್ಕಿ ಕಳ್ಳತನ ಪ್ರಕರಣದಲ್ಲಿ ಮಾಸಿಕ 50,000 ರೂ. ಪಡೆಯುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಪ್ರಭು ಹಾಗೂ ಈಗ ಭೀಮರಾಯ ಹಣ ಪಡೆಯುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಶಿವಪ್ಪನನ್ನು ಬಂಧಿಸಿ ವಿಚಾರಣೆ ವೇಳೆ ಕಳ್ಳಾಟ ಬೆಳಕಿಗೆ ಬಂದಿದೆ. ಈಗಾಗಲೇ ಶಿವಪ್ಪ ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.