ನವದೆಹಲಿ: ಸುಪ್ರೀಂಕೋರ್ಟ್ ವಕೀಲೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಅಜಯ್ ನಾಥ್ ಎಂಬವರನ್ನು ಇಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಆರೋಪಿಯ ಪತ್ನಿ ರೇಣು ಸಿನ್ಹಾ (61) ಎಂದು ಗುರುತಿಸಲಾಗಿದೆ. ರೇಣು ಸಿನ್ಹಾ ತನ್ನ ಸಹೋದರನ ಕರೆಗಳಿಗೆ ಸ್ಪಂದಿಸದ ಹಿನ್ನೆಲೆ ಆತಂಕಗೊಡು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬಂಗಲೆಯಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಬಂಗಲೆಯನ್ನು ಲಾಕ್ ಮಾಡಲಾಗಿತ್ತು. ಬಾಗಿಲು ಒಡೆದು ಪ್ರವೇಶ ಮಾಡಿದಾಗ ರೇಣು ಸಿನ್ಹಾ ಶವ ಬಾತ್ ರೂಂನಲ್ಲಿ ಬಿದ್ದಿತ್ತು. ಹತ್ಯೆ ಮಾಡಿದ ಆರೋಪಿ ಅಜಯ್ ನಾಥ್ ಬಂಗಲೆಯ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಂಡಿದ್ದ. ಸದ್ಯ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ವಿಚಾರಣೆ ವೇಳೆ, ಅಜಯ್ ನಾಥ್ ಅವರು ತಮ್ಮ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಗಡವನ್ನೂ ತೆಗೆದುಕೊಂಡಿದ್ದರು ಎಂದು ಒಪ್ಪಿಕೊಂಡರು. ಆದರೆ ಅವರ ಪತ್ನಿ ಮಾರಾಟ ಮಾಡುವ ತೀರ್ಮಾನವನ್ನು ವಿರೋಧಿಸಿದ್ದರು. ಮೃತ ವಕೀಲರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಇತ್ತೀಚೆಗಷ್ಟೇ ಅಂದರೆ ಒಂದು ತಿಂಗಳ ಹಿಂದೆ ಅವರು ಕ್ಯಾನ್ಸರ್ ಮುಕ್ತವಾಗಿದ್ದರು ಎಂದು ಅಜಯ್ ನಾಥ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ರೇಣು ಅತಿಯಾದ ರಕ್ತ ಸೋರಿಕೆಯಿಂದ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಪೊಲೀಸರು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಯುತ್ತಿದೆ.










