ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ಸ್ಪೆಷಲ್ ಕೋರ್ಟ್ ಇಂದು ಖುಲಾಸೆಗೊಳಿಸಿದೆ.
ಜುಲೈ 17, 2014ರಂದು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಶವ ಪತ್ತೆಯಾಗಿತ್ತು. ಲಕ್ಷುರಿ ಕೋಣೆಯ ಬೆಡ್ ಮೇಲೆ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸುನಂದಾ ಮರಣದ ಬಳಿಕ ಶಶಿ ತರೂರ್ ಆರೋಪಗಳು ಕೇಳಿ ಬಂದ ಹಿನ್ನೆಲೆ ದೆಹಲಿ ಪೊಲೀಸರು ಐಪಿಸಿ 498ಎ ಮತ್ತು 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ ಶಶಿ ತರೂರ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ದೊರೆಯದ ಕಾರಣ, ಕಕ್ಷಿದಾರರನ್ನು ಮುಕ್ತಗೊಳಿಸಬೇಕು ಎಂದು ತರೂರ್ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು. ಇದೀಗ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಮುಕ್ತಗೊಳಿಸಿರುವ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದೆಹಲಿ ಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಶಶಿ ತರೂರ್, ಕೋರ್ಟ್ ಆದೇಶಕ್ಕೆ ಅತ್ಯಂತ ಕೃತಜ್ಞನಾಗಿದ್ದೇನೆ. ಕಳೆದ ಏಳು ವರ್ಷಗಳ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.










