ಹಾಸನ: ಪತ್ನಿ ಹಾಗೂ ಆಕೆಯ ಪೋಷಕರ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕಿರಣ್ ಬಿ.ಬಿ (26) ಎಂದು ಗುರುತಿಸಲಾಗಿದೆ. ಆತ ಉದಯಪುರದಲ್ಲಿ ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಸ್ಪಂದನಾ ಕಿರಣ್‍ನೊಂದಿಗೆ ಸಂಸಾರ ನಡೆಸದೇ ತವರು ಮನೆ ಸೇರಿದ್ದಳು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ, ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಅಲ್ಲದೇ ಮೂವರು ಸೇರಿ ಕಿರಣ್‍ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಇನ್ನು ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಜೈಲುಪಾಲಾಗಿದ್ದ ಕಿರಣ್, ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಳೆದ ಎರಡು ದಿನಗಳ ಹಿಂದೆ ಸ್ಪಂದನಾಳ ಪೋಷಕರು ಬೇಕರಿ ಬಳಿ ಬಂದು ಆತನೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿದ್ದರು. ಈ ಎಲ್ಲಾ ಘಟನೆಯಿಂದ ಮನನೊಂದು ಜುಲೈ 31ರ ರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










