ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್.

63
firstsuddi

ನವದೆಹಲಿ : ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ನೀಡಿದೆ.

ಜಾಮೀನು ನಿರಾಕರಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮು.ನ್ಯಾ ಯು.ಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಪ್ರತಿಯೊಬ್ಬ ವ್ಯಕ್ತಿಗೆ ಮುಕ್ತ ಅಭಿವ್ಯಕ್ತಿಗೆ ಹಕ್ಕಿದೆ. ಅವರು ಸಂತ್ರಸ್ತರಿಗೆ ನ್ಯಾಯ ಬೇಕು ಎಂದು ತೋರಿಸಲು ಮತ್ತು ಸಾಮಾನ್ಯ ಧ್ವನಿ ಎತ್ತಲು ಪ್ರಯತ್ನಿಸುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆಯೇ, ಎಂದು ಪೀಠವು ಪ್ರಶ್ನಿಸಿತು.

ಇದಕ್ಕೆ ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಸೆಪ್ಟೆಂಬರ್ 2020 ರಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಭೆಯಲ್ಲಿ ಸಿದ್ದಿಕ್ ಕಪ್ಪನ್ ಭಾಗಿಯಾಗಿದ್ದರು. ಈ ಸಭೆಯಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಹೋಗಿ ಗಲಭೆಗಳನ್ನು ಪ್ರಚೋದಿಸಲು ನಿರ್ಧರಿಸಲಾಯಿತು. ಪಿಎಫ್ ಐನ ಉನ್ನತ ಸದಸ್ಯರು ಅವರು ಕಪ್ಪನ್ ಅವರ ಪಿತೂರಿಯನ್ನು ಬಹಿರಂಗಪಡಿಸಿದ್ದಾರೆ. ಇಡೀ ಪ್ರಚಾರವು ಹತ್ರಾಸ್ ಸಂತ್ರಸ್ತರಿಗೆ ನ್ಯಾಯವಾಗಿದ್ದರೂ, ಅದರ ಅಜೆಂಡಾವು ಪ್ರಧಾನಿ ರಾಜೀನಾಮೆ ನೀಡುವುದು ಆಗಿತ್ತು ಎಂದು ವಾದಿಸಿದರು.

ಈ ವಾದವನ್ನು ತಿರಸ್ಕರಿಸಿದ ಪೀಠವು, 2011 ರಲ್ಲಿ ಇಂಡಿಯಾ ಗೇಟ್ ನಲ್ಲಿ ನಿರ್ಭಯಾಗಾಗಿ ಪ್ರತಿಭಟನೆಗಳು ನಡೆದಿವೆ. ಬದಲಾವಣೆಯನ್ನು ತರಲು ಕೆಲವೊಮ್ಮೆ ಪ್ರತಿಭಟನೆಗಳು ಬೇಕಾಗುತ್ತವೆ. ಅದರ ನಂತರ ಕಾನೂನುಗಳಲ್ಲಿ ಬದಲಾವಣೆಯಾಗಿದೆ ಎಂದು ನಿಮಗೆ ತಿಳಿದಿಲ್ವೇ ಎಂದು ಪ್ರಶ್ನಿಸಿ ಜಾಮೀನು ಮಂಜೂರು ಮಾಡಿತು.

ಮಲಯಾಳಂ ಸುದ್ದಿ ಪೋರ್ಟಲ್ ನ ವರದಿಗಾರ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್, 2020 ರ ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರದ ಕುರಿತು ವರದಿ ಮಾಡಲು ಹತ್ರಾಸ್ಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು.