ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆ ಆಗಿವೆ. ಈ ಸಂಬಂಧ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಸ್ಥಳಕ್ಕೆ ಡಿವೈಎಸ್ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ.
ನಗರದ ದೊಡ್ಡ ಸಿದ್ದವ್ವನಹಳ್ಳಿಯ ಜಗನ್ನಾಥ್ ರೆಡ್ಡಿ ಎಂಬವರಿಗೆ ಸೇರಿದ ಮನೆ ಇದಾಗಿದೆ. ಇವರು ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದು ನಿವೃತ್ತರಾಗಿದ್ದರು. ಮನೆಯ ಮುಂದೆ ನಿವೃತ್ತ ಇಂಜಿನಿಯರ್ ಎಂಬ ಬೋರ್ಡ್ ಇದೆ. ಇವೆಲ್ಲವೂ ಒಂದೇ ಕುಟುಂಬಸ್ಥರ ಶವಗಳು ಎಂದು ಹೇಳಲಾಗುತ್ತಿದ್ದು, ಸುಮಾರು 4 ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಇದೀಗ ಶಂಕಿಸಲಾಗಿದೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ ಹಾಗೂ ಮಗಳು ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಜಗನ್ನಾಥ ರೆಡ್ಡಿಗೆ 3 ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳು ಎಂದು ಹೇಳಲಾಗಿದೆ. ಕುಟುಂಬಸ್ಥರಿಗೆ ಗಂಭೀರ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ. ಜಗನ್ನಾಥ ರೆಡ್ಡಿಯವರ ಪತ್ನಿ ಅಸ್ವಸ್ಥರಾಗಿದ್ದು , 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ. ಈ ಮನೆಯವರು ಯಾರನ್ನೂ ಒಳಬಿಟ್ಟುಕೊಳ್ಳುತ್ತಿರಲಿಲ್ಲ. ಬಾಗಿಲು ತೆರೆಯದೇ ಕಿಟಕಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
2022ರ ಬಳಿಕ ಈ ಮನೆಯವರು ಯಾರಿಗೂ ಕಾಣಿಸಿಕೊಂಡಿಲ್ಲ. ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೂಡ ಕಂಡುಬಂದಿದೆ. ಆದರೆ ಈ ಪ್ರಕರಣ ಹೆಚ್ಚಿನ ಕುತೂಹಲ ಗರಿಗೆದರಿಸುವಂತಿದೆ. ಸಿಕ್ಕ ಐದು ಅಸ್ಥಿಪಂಜರಗಳು ಯಾರದು? ಎಲ್ಲರೂ ಏಕಕಾಲಕ್ಕೆ ಸತ್ತರೇ? ಸಾವಿಗೆ ಆತ್ಮಹತ್ಯೆ ಕಾರಣವೇ? ಸಾವಿಗೆ ಕಾಯಿಲೆ ಅಥವಾ ಅನ್ಯ ಕಾರಣಗಳಿದ್ದಿರಬಹುದೇ? ನಾಲ್ಕಾರು ವರ್ಷಗಳಾದರೂ ಈ ಸಾವುಗಳು ಯಾರ ಗಮನಕ್ಕೂ ಬರದೇ ಇದ್ದುದು ಹೇಗೆ? ಎಂಬ ಪ್ರಶ್ನೆಗಳು ಮೂಡತೊಡಗಿದ್ದು, ಈ ಕುರಿತು ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.










