ತಿರುವನಂತಪುರಂ: ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಕೇರಳದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸ್ವಾಗತಿಸಿವೆ. ಆದರೆ, ಇದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅನ್ನು ಕೂಡ ನಿಷೇಧಿಸಬೇಕು ಎಂದು ಒತ್ತಾಯಿಸಿವೆ.
ಪಿಎಫ್ಐ ಚಟುವಟಿಕೆಗಳನ್ನು ಖಂಡಿಸಿದ ಮುಸ್ಲಿಂ ಲೀಗ್ ನ ಹಿರಿಯ ನಾಯಕ ಎಂ.ಕೆ.ಮುನೀರ್, ಈ ಸಂಘಟನೆಯೂ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿದೆ ಮತ್ತು ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳಲು ಸಮುದಾಯದವರನ್ನು ಮನವೊಲಿಸಿತ್ತು ಎಂದು ಹೇಳಿದರು.
ರಾಜ್ಯದಲ್ಲಿರುವ ಎಲ್ಲಾ ಇಸ್ಲಾಮಿಕ್ ವಿದ್ವಾಂಸರು ಉಗ್ರಗಾಮಿ ಸಿದ್ಧಾಂತಗಳನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ ಪಿಎಫ್ಐ ಸಣ್ಣ ಮಕ್ಕಳ ಬಾಯಲ್ಲೂ ಅವಹೇಳನಕಾರಿ ಘೋಷಣೆಗಳನ್ನು ಕೂಗುವಂತೆ ಮಾಡಿತ್ತು. ಯಾವ ಇಸ್ಲಾಂ ಅವರನ್ನು ಹಾಗೆ ಮಾಡಲು ಹೇಳಿದೆ ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಮತ್ತು ಪಿಎಫ್ಐ-ಎಸ್ಡಿಪಿಐ ಎರಡರ ಕಾರ್ಯಗಳನ್ನು ಮುಸ್ಲಿಮ್ ಲೀಗ್ ಯಾವಾಗಲೂ ವಿರೋಧಿಸುತ್ತದೆ ಎಂದು ಹೇಳಿದ ಮುನೀರ್, ಆಯಾ ಸಮುದಾಯಗಳು ಅಂತಹ ಸಂಘಟನೆಗಳ ಕೋಮು ಸಿದ್ಧಾಂತಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ಆರ್ಎಸ್ಎಸ್ ಅನ್ನು ಕೂಡ ಇದೇ ರೀತಿ ನಿಷೇಧಿಸಬೇಕು. ಕೇರಳದಲ್ಲಿ ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡನ್ನೂ ಸಮಾನವಾಗಿ ನಿಷೇಧಿಸಬೇಕು. ಎರಡೂ ಸಂಘಟನೆಗಳು ಕೋಮು ದ್ವೇಷವನ್ನು ಬಿತ್ತಿವೆ. ಹಾಗೆಯೇ ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಪ್ರಯತ್ನಿಸಿವೆ ಎಂದು ಆರೋಪಿಸಿದ್ದಾರೆ.










