ಕಲಬುರಗಿ : ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ 26 ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪಿಎಸ್ಐ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ 26 ಮಂದಿಗೆ ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ. ಬಿ. ಪಾಟೀಲ್ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ 2021 ರ ಅಕ್ಟೋಬರ್ ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು.
2022 ರ ಎಪ್ರಿಲ್ 8 ರಂದು ಕಲಬುರಗಿ ಚೌಕ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ಪೊಲೀಸರು ಇಲ್ಲಿವರಗೆ 53 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಇನ್ನು ಈ ಹಿಂದೆ ಆರೋಪಿಗಳು ಅನೇಕ ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಆಗ ಜಾಮಿನು ಸಿಕ್ಕಿರಲಿಲ್ಲ.
ಕಳೆದ ತಿಂಗಳು ಕಿಂಗ್ ಪಿನ್ ಆರ್ ಡಿ ಪಾಟೀಲ್ ಸೇರಿದಂತೆ ಕೆಲವರಿಗೆ ಜಾಮಿನು ಸಿಕ್ಕಿತ್ತು. ಇದೀಗ ಮತ್ತೆ 26 ಆರೋಪಿಗಳಿಗೆ ಜಾಮೀನು ದೊರತಿದೆ. ಪಿಎಸ್ಐ ಅಕ್ರಮದಲ್ಲಿ ಬಂಧಿತ 53 ಜನರ ಪೈಕಿ ಇಲ್ಲಿವರಗೆ 36 ಆರೋಪಿಗಳಿಗೆ ಜಾಮೀನು ಸಿಕ್ಕಿದೆ.










