ಬೆಂಗಳೂರು : ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾಧ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿದ್ದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಸಿದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಸಮಾಜದ ಒಂದು ವರ್ಗದ ಜನರು ಪ್ರತಿಭಟನೆಯ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ. ಕಾಂಗ್ರೆಸ್ ನವರ ಕಿತಾಪತಿಯಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಯು.ಟಿ. ಖಾದರ್ ನಂತಹ ನಾಯಕರ ಕೈವಾಡದಿಂದ ಪ್ರತಿಭಟನೆ ಹೆಚ್ಚಾಗುತ್ತಿದೆ. ಮುಸಲ್ಮಾನರ ರಕ್ಷಣೆ ನಮ್ಮ ಜವಾಬ್ದಾರಿ. ಈ ವೇಳೆ ಎಲ್ಲರೂ ಶಾಂತಿ ಕಾಪಾಡಬೇಕು. ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನು ಮುಂದುವರೆಸಿದರೆ ಅದರ ಪರಿಣಾಮ ಮುಂದೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶಾಧ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂಜಾಗ್ರತ ಕ್ರಮವಾಗಿ ಇಂದಿನಿಂದ 3ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.










