ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಸೊಸೆ ಸಹಿತ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಶ್ಮಿ, ಅಕ್ಷಯ್ ಹಾಗೂ ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಲಕ್ಷ್ಮಮ್ಮ ಹತ್ಯೆಯಾದ ಮಹಿಳೆಯಾಗಿದ್ದಾರೆ. ಕಳೆದ ಅಕ್ಟೋಬರ್ 5ರಂದು ಲಕ್ಷ್ಮಮ್ಮ ನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು, ಹೃದಯಾಘಾತವೆಂದು ಕಥೆ ಸೃಷ್ಟಿಸಿದ್ದರು.
ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕ್ರಮೇಣ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಇತ್ತ ಮನೆಯ ಹಣದ ವ್ಯವಹಾರ ಸಂಬಂಧ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾದು ಕುಳಿತಿದ್ದಳು.
ಈ ಸಂಬಂಧ ರಶ್ಮಿ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 5ರಂದು ಮನೆಯಲ್ಲಿ ಗಂಡ ಇರದಿದ್ದಾಗ ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿದ್ದ ರಶ್ಮಿ, ಪ್ರಿಯಕರ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆಯನ್ನು ಕೊಲೆ ಮಾಡಿದ್ದಳು. ನಂತರ ಹೃದಯಾಘಾತವಾಗಿ ಸಾವನ್ನಪ್ಪಿರುವುದಾಗಿ ಬಿಂಬಿಸಿದ್ದಳು.
ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.










